ಬೆಂಗಳೂರು: ಹೊಸೂರು ರಸ್ತೆಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಬೊಮ್ಮನಹಳ್ಳಿ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಳೆದ ಕೆಲವು ದಿನಗಳ ಹಿಂದೆ ಕೋರಮಂಗಲ ಬಳಿ ಐಷಾರಾಮಿ ಕಾರೊಂದು ಅಪಘಾತವಾಗಿ ಏಳು ಜನರ ಸಾವಿಗೆ ಕಾರಣವಾದ ಆ ಕರಾಳ ಘಟನೆ ಮಾಸುವ ಮುನ್ನವೇ ಹೊಸೂರು ರಸ್ತೆಯಲ್ಲಿ ಇಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಬಳಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಬೆಂಗಳೂರಿನ ರಸ್ತೆಗಳು ಜವರಾಯನ ಮಡಿಲೆ ಎಂಬ ಸಂದೇಹ ಹುಟ್ಟುಹಾಕಿದೆ.

ಫ್ಲೈ ಓವರ್ ಮೇಲೆ ಹೋಗುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ, ಡಿಕ್ಕಿಯ ರಭಸಕ್ಕೆ ದ್ವಿ ಚಕ್ರ ವಾಹನ ಸವಾರರಿಬ್ಬರೂ ಫ್ಲೈ ಓವರ್ ನಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಮೃತರಲ್ಲಿ ಒಬ್ಬ ಯುವಕ ಮತ್ತು ಒಬ್ಬರು ಯುವತಿ ಸೇರಿದ್ದಾರೆ. ಮೃತರ ಖಚಿತ ಮಾಹಿತಿ ಇನ್ನಷ್ಟೇ ದೊರೆಯಬೇಕು. ಓವರ್ ಟೇಕ್ ಮಾಡಲು ಹೋಗಿ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ತಮಿಳುನಾಡಿನ ಯುವಕ ಹಾಗೂ ಯುವತಿ ಬೆಂಗಳೂರಿನಿಂದ ಹೊಸೂರಿಗೆ ಹೋಗುವಾಗ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇತ್ತೀಚಿಗೆ ಕೋರಮಂಗಲದ ಬಳಿ ಹೊಸೂರು ಶಾಸಕನ ಪುತ್ರ ಸೇರಿದಂತೆ 6ಜನರು ಭೀಕರ ಅಪಘಾತದಿಂದ ಸಾವನ್ನಪ್ಪಿದ್ದರು. ಈ ಘಟನೆ ನಡೆದ ಎರಡು ವಾರಗಳ ಬಳಿಕ ಮತ್ತೊಂದು ಭೀಕರ ಅಪಘಾತಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಸಾಕ್ಷಿಯಾಗಿದೆ.