ಬೆಂಗಳೂರು : ಇಂದಿನಿಂದ ವಿಧಾನ ಮಂಡಲ ಅಧಿವೇಶನ ಪ್ರಾರಂಭವಾಗಿದೆ. ಮೊದಲ ದಿನವೇ ಕಾಂಗ್ರೆಸ್, ಬಿಜೆಪಿ ಸರ್ಕಾರದ ವಿರುದ್ಧ ಸಮರ ಸಾರಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧಕ್ಕೆ ಎತ್ತಿನ ಗಾಡಿ ಚಲೋ ಪ್ರತಿಭಟನೆ ನಡೆಯಿತು.

ಎತ್ತಿನ ಗಾಡಿಯಲ್ಲಿಯೇ ಕಾಂಗ್ರೆಸ್ ನಾಯಕರು ಅಧಿವೇಶನದಲ್ಲಿ ಪಾಲ್ಗೊಳ್ಳಲು ವಿಧಾನಸೌಧಕ್ಕೆ ತೆರಳಿ ಬೆಲೆ ಏರಿಕೆಯಿಂದ ಭವಿಷ್ಯದಲ್ಲಿ ಎತ್ತಿನಗಾಡಿಯೇ ಗತಿ ಎಂಬ ಸಂದೇಶ ಸಾರಿದರು. ತಮ್ಮ ನಿವಾಸದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿಧಾನಸೌಧಕ್ಕೆ ಎತ್ತಿನಗಾಡಿಯಲ್ಲಿಯೇ ಬರುವುದರ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.

ಇನ್ನು, ಮೊದಲು ವಿಧಾನಸೌಧದ ಒಳಗಡೆ ಎತ್ತಿನ ಗಾಡಿಯನ್ನು ಬಿಡಲು ಪೊಲೀಸರು ನಿರಾಕರಿಸಿದರು, ಈ ವೇಳೆ ಪೊಲೀಸರ ಜೊತೆ ವಾಗ್ವಾದ ನಡೆಸಿ ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನಸೌಧದ ಒಳಗಡೆ ಬಿಡುವಂತೆ ಒತ್ತಾಯಿಸಿದರು. ಎತ್ತಿನ ಗಾಡಿಯಲ್ಲಿ ವಿಧಾನಸೌಧದ ಒಳಗಡೆ ಹೋಗಬಾರದು ಎಂದು ಕಾನೂನು ಇದೆಯಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಹಕ್ಕುಚ್ಯತಿ ಮಂಡಿಸುವ ಎಚ್ಚರಿಕೆ ಕೊಟ್ಟರು. ಕೊನೆಗೆ ಎತ್ತಿನ ಗಾಡಿಯಲ್ಲಿ ವಿಧಾನಸೌಧ ಪ್ರವೇಶಕ್ಕೆ ಪೊಲೀಸರು ಅವಕಾಶ ನೀಡಿದರು.