ಮಂಗಳೂರು : ಮಾಜಿ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯರಾದ ಆಸ್ಕರ್ ಫರ್ನಾಂಡಿಸ್ ಇಂದು ಸಂಜೆ ಸುಮಾರು 4.00 ಘಂಟೆ ಹೊತ್ತಿಗೆ ನಿಧನರಾದರು. ಆಸ್ಕರ್ ರವರಿಗೆ 80 ವರ್ಷ ವಯಸ್ಸಾಗಿದ್ದು ಇದೇ ಜುಲೈನಿಂದ ಮಂಗಳೂರಿನ ಯೆನೆಪೊಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಎರಡು ತಿಂಗಳ ಹಿಂದೆ ಯೋಗ ಮಾಡುತ್ತಿದ್ದ ವೇಳೆ ಆಸ್ಕರ್ ಫರ್ನಾಂಡಿಸ್ ರವರು ಆಕಸ್ಮಿಕವಾಗಿ ಜಾರಿ ಬಿದ್ದಿದ್ದರು. ಈ ವೇಳೆ ಅವರಿಗೆ ಬಾಹ್ಯವಾಗಿ ಯಾವುದೇ ಗಾಯಗಳಾಗಿರಲಿಲ್ಲ. ಆದರೆ ದೇಹದ ಒಳಗೆ ಗಾಯಗಳಾಗಿದ್ದು ಡಯಾಲಿಸಿಸ್ ಮಾಡುವ ವೇಳೆ ಅವರ ರಕ್ತ ಹೆಪ್ಪುಗಟ್ಟಿರುವದು ಪತ್ತೆಯಾಗಿತ್ತು. ಅವರ ಮೆದುಳಿಗೆ ಪೆಟ್ಟು ಬಿದ್ದ ಹಿನ್ನಲೆ ಯೆನೆಪೊಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಕೊನೆಯುಸಿರು ಎಳೆದಿದ್ದಾರೆ. ಆಸ್ಕರ್ ಫರ್ನಾಂಡಿಸ್ ರವರ ಅಗಲಿಕೆಗೆ ಕಾಂಗ್ರೇಸ್ ನಾಯಕರು ಸೇರಿದಂತೆ ಅನೇಕ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ.
