ಬೆಂಗಳೂರು : ಇಂದಿನಿಂದ 10 ದಿನಗಳ ಕಾಲ ವಿಧಾನಮಂಡಲ ಅಧಿವೇಶನ ನಡೆಯಲಿದೆ. 6 ತಿಂಗಳು ಬಳಿಕ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನ ಇದಾಗಿದ್ದು ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಆದ ಬಳಿಕ ಮೊದಲ ಅಧಿವೇಶನವಾಗಿದೆ.
ಇನ್ನೂ ಅಧಿವೇಶನದಲ್ಲಿ ಬಿಸಿ ಬಿಸಿ ವಿಚಾರಗಳು ಚರ್ಚೆಯಾಗುವ ಸಾಧ್ಯತೆಗಳಿದೆ. ಕೋವಿಡ್ ನಿರ್ವಹಣೆಯಲ್ಲಿ ವೈಫಲ್ಯ, ಭ್ರಷ್ಟಾಚಾರ, ಸಾಲದ ಹೊರೆ, ಬೆಲೆ ಏರಿಕೆ, ಜಾತಿ ಗಣತಿ ವರದಿ ಮಂಡನೆಗೆ ವಿಳಂಬ ಸೇರಿದಂತೆ ಹಲವು ಅಸ್ತ್ರಗಳೊಂದಿಗೆ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜಾಗಿವೆ. ಹೀಗಾಗಿ ಕಲಾಪ ಮಾತಿನ ಸಮರದಿಂದ ಕೂಡಿರಲಿದೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ನಡೆಯಲಿರುವ ಮೊಟ್ಟಮೊದಲ ವಿಧಾನಮಂಡಲ ಅಧಿವೇಶನ ಇದಾಗಿದ್ದು, ಸಾರ್ವಜನಿಕರಿಗೆ ಬಿಸಿ ತುಪ್ಪವಾಗಿರೋ ಬೆಲೆ ಏರಿಕೆ, ನೆರೆ, ಪಡಿತರ ಆಹಾರಧಾನ್ಯ ಕಡಿತ, ಮೈಸೂರು ಅತ್ಯಾಚಾರ ಪ್ರಕರಣ, ಜಾತಿ ಗಣತಿ ವರದಿ ಜಾರಿಗೆ ಆಗ್ರಹ, ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿದ ಸಣ್ಣ ಸಮುದಾಯಗಳಿಗೆ ಇನ್ನೂ ದೊರೆಯದ ನೆರವು ಹಾಗೂ ಕುಸಿಯುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಹೀಗೆ, ಸಾಲು-ಸಾಲು ವಿಷಯಗಳನ್ನು ನಿರ್ವಹಣೆ ಅವರಿಗೆ ಸವಾಲಿನ ಕೆಲಸವಾಗಿದೆ.
ಅಧಿವೇಶನದ ಮೊದಲ ದಿನವಾದ ಇಂದು ಇಂಧನ ಬೆಲೆ ಏರಿಕೆ ಖಂಡಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎತ್ತಿನಗಾಡಿಯಲ್ಲಿ ವಿಧಾನಸೌಧಕ್ಕೆ ಆಗಮಿಸಲಿದ್ದರು. ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರ ಇಳಿಕೆಗೆ ಪಟ್ಟು ಹಿಡಿಯಲಿದ್ದಾರೆ.
18 ವಿಧೇಯಕ ಮಂಡನೆ
10 ದಿನಗಳ ವಿಧಾನಮಂಡಲ ಅಧಿವೇಶನದಲ್ಲಿ 18 ವಿಧೇಯಕಗಳನ್ನು ಮಂಡಿಸಲು ಸರ್ಕಾರ ಸಜ್ಜಾಗಿದೆ. 10 ವಿಧೇಯಕಗಳು, ನಾಲ್ಕು ಸುಗ್ರೀವಾಜ್ಞೆಗಳು ಮತ್ತು ನಾಲ್ಕು ಅಂಗೀಕಾರಕ್ಕೆ ಬಾಕಿ ಇರುವ ವಿಧೇಯಕ ಸೇರಿ ಒಟ್ಟು 18 ವಿಧೇಯಕಗಳು ಮಂಡನೆಯಾಗಲಿವೆ.
ಬೆಂಗಳೂರು ನೀರು ಸರಬರಾಜು ಮತ್ತು ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕ, ಕಳ್ಳಭಟ್ಟಿವ್ಯಾಪಾರಿಗಳ, ಮಾದಕವಸ್ತು ಅಪರಾಧಿಗಳ, ಜೂಜುಕೋರರ, ಗೂಂಡಾಗಳ, ಅನೈತಿಕ ವ್ಯವಹಾರ ಅಪರಾಧಿಗಳ, ಕೊಳಚೆ ಪ್ರದೇಶಗಳನ್ನು ಕಬಳಿಸುವವರ ಮತ್ತು ದೃಶ್ಯ ಅಥವಾ ಧ್ವನಿ, ಕಳ್ಳಮುದ್ರಕರ ಚಟುವಟಿಕೆಗಳ ಪ್ರತಿಬಂಧಕ (ತಿದ್ದುಪಡಿ) ವಿಧೇಯಕ, ಬಂಧಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ, ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ, ಕರ್ನಾಟಕ ಬಂಧೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ, ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳು (ತಿದ್ದುಪಡಿ) ವಿಧೇಯಕ, ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ, ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗಗಳ (ತಿದ್ದುಪಡಿ) ವಿಧೇಯಕ, ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕ, ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳು ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕಗಳು ಮಂಡನೆಯಾಗಲಿವೆ.
ಜೊತೆಗೆ ಕಳೆದ ಅಧಿವೇಶನದ ನಂತರ ಸರ್ಕಾರದಿಂದ ಹೊರಡಿಸಲಾದ ನಾಲ್ಕು ಸುಗ್ರೀವಾಜ್ಞೆಗಳು ಮಂಡನೆಯಾಗಲಿವೆ… ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ), ಕರ್ನಾಟಕ ಸಾದಿಲ್ವಾರು ನಿಧಿ (ತಿದ್ದುಪಡಿ), ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ), ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಎರಡನೇ ತಿದ್ದುಪಡಿ) ಮಂಡಿಸಲಾಗುತ್ತಿದೆ.
ವಿಧಾನಸಭೆಯಲ್ಲಿ ಮಂಡನೆಯಾಗಿ ಅಂಗೀಕಾರಕ್ಕೆ ಬಾಕಿ ಇರುವ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ, ಮೀಸಲಾತಿ) (ತಿದ್ದುಪಡಿ) ವಿಧೇಯಕ, ಕರ್ನಾಟಕ ಲೋಕಾಯುಕ್ತ (ಮೂರನೇ ತಿದ್ದುಪಡಿ) ವಿಧೇಯಕ, ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕಗಳು ಮಂಡನೆಯಾಗಲಿವೆ. ಕೊರೋನಾ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.