ನವದೆಹಲಿ : ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಬಿಸಿಲು, ಚಳಿ, ಮಳೆ, ಗಾಳಿಗೆ ಹೆಸರದೆ ಧರಣಿ ಮುಂದುವರಿಸಿದ್ದಾರೆ. ನಿನ್ನೆ ದೆಹಲಿಯಲ್ಲಿ ಸುರಿದ ಭಾರಿ ಮಳೆಯಲ್ಲೂ ಪ್ರತಿಭಟನೆ ನಡೆಸುವ ಮೂಲಕ ರೈತರು ಗಟ್ಟಿತನವನ್ನು ಪ್ರದರ್ಶಿಸಿದ್ದಾರೆ.
ಶನಿವಾರ ದೆಹಲಿಯಲ್ಲಿ ಭಾರಿ ಮಳೆ ಸುರಿದ ಪರಿಣಾಮ ರಸ್ತೆಗಳ ಮೇಲೆ ನೀರು ನುಗ್ಗಿತು. ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರದೇಶ ಜಲಾವೃತಗೊಂಡಿತ್ತು. ಹೀಗೆ ಜಲಾವೃತಗೊಂಡ ಪ್ರದೇಶದಲ್ಲಿ ಕುಳಿತು ಪ್ರತಿಭಟನೆ ನಡೆಸುವ ಮೂಲಕ ರೈತರು ತಮ್ಮ ಬೇಡಿಕೆಗೆ ಬದ್ದವಾಗಿರುವ ಸಂದೇಶ ರವಾನಿಸಿದ್ದಾರೆ.

ರೈತ ಹೋರಾಟದ ನೇತೃತ್ವ ಪಡೆದುಕೊಂಡಿರುವ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ನೀರಿನ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದರು. ಇದು ಚರಂಡಿಗಳಿಂದ ಉಕ್ಕಿ ಹರಿದು ಬಂದ ಎಂದು ಗೊತ್ತಿದ್ದರೂ ಕಲುಷಿತ ನೀರಿನಲ್ಲೆ ಕುಳಿತು ಪ್ರತಿಭಟನೆ ಮುಂದುವರಿಸಿದರು.
ಈ ಹಿಂದೆ ಪ್ರತಿಭಟನಾ ಪ್ರದೇಶಗಳಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಲು ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೆ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಚರಂಡಿಗಳನ್ನು ಸ್ವಚ್ಛ ಮಾಡಿರಲಿಲ್ಲ. ಹೀಗಾಗಿ ಶನಿವಾರ ಸುರಿದ ಮಳೆಯಿಂದ ಚರಂಡಿ ಉಕ್ಕಿ ಪ್ರತಿಭಟನಾ ಸ್ಥಳ ಜಲಾವೃತಗೊಂಡಿದೆ.
ಇನ್ನು ಅಬ್ಬರದ ಮಳೆಗೆ ಅಬ್ಬರದ ಮಳೆಗೆ ರೈತರು ಹಾಕಿಕೊಂಡಿದ್ದ ತಾತ್ಕಾಲಿಕ ಟೆಂಟುಗಳು ನೆಲಸಮವಾಗಿದ್ದು ಹೊಸ ಟೆಂಟುಗಳನ್ನು ನಿರ್ಮಾಣ ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ಈ ರೈತರ ಪ್ರತಿಭಟನೆ ಗಟ್ಟಿತನ ಎಲ್ಲೂ ಕಡಿಮೆಯಾಗಿಲ್ಲ. ಚಳಿ ಗಾಳಿ ಬಿಸಿಲು ನೋಡಿದ್ದ ನಾವು ಈಗ ಮಳೆ ನೋಡುತ್ತಿದ್ದೇವೆ ಯಾವುದಕ್ಕೂ ನಾವು ಹೆದರವುದಿಲ್ಲ ಎಂದು ರೈತರು ಹೇಳುತ್ತಿದ್ದಾರೆ.