ಬೆಳಗಾವಿ: ಕಾಂಗ್ರೆಸ್ ತೊರೆಯುವಾಗ ಎಷ್ಟು ಹಣ ಬೇಕೆಂದು ಬಿಜೆಪಿ ಕೇಳಿತ್ತು. ಆದ್ರೆ ನಾನು ಹಣಕ್ಕಾಗಿ ಬಂದಿಲ್ಲ. ಒಳ್ಳೆಯ ಸ್ಥಾನ ನೀಡಬೇಕೆಂದು ತಿಳಿಸಿದ್ದೆ ಎಂದು ಮಾಜಿ ಸಚಿವ, ಬಿಜೆಪಿ ಶಾಸಕ ಶ್ರೀಮಂತ್ ಪಾಟೀಲ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸದ್ಯ ಶ್ರೀಮಂತ್ ಪಾಟೀಲ್ ಹೇಳಿಕೆಯಿಂದ ಬಿಜೆಪಿಯಲ್ಲಿ ಆಕ್ರೋಶ ವ್ಯಕ್ತವಾಗಿದೆ ಎನ್ನಲಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನ ಮಾಡಲು ಬಿಜೆಪಿ ಹಣದ ಹೊಳೆಯನ್ನೇ ಹರಿಸಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಈ ಸಂಬಂಧ ಕೆಲ ಆಡಿಯೋ, ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಆದ್ರೆ ಬಿಜೆಪಿ ಮಾತ್ರ ಎಲ್ಲ ಆರೋಪಗಳನ್ನು ತಳ್ಳಿ ಹಾಕಿತ್ತು.

ಯಡಿಯೂರಪ್ಪ ಅವರ ಕಾಲದಲ್ಲಿ ಸಚಿವರಾಗಿದ್ದ ಶ್ರೀಮಂತ್ ಪಾಟೀಲ್ ಅವರನ್ನು ಈ ಬಾರಿ ಸಂಪುಟದಿಂದ ಕೈಬಿಡಲಾಗಿದೆ. ಅಧಿವೇಶನ ಆರಂಭದಲ್ಲಿ ಶ್ರೀಮಂತ್ ಪಾಟೀಲ್ ಹೇಳಿಕೆ ವಿಪಕ್ಷಗಳಿಗೆ ಒಳ್ಳೆಯ ಅಸ್ತ್ರ ಸಿಕ್ಕಂತಾಗಿದೆ. ಇದೇ ಹೇಳಿಕೆಯನ್ನು ಉಲ್ಲೇಖಿಸಿ ಆಡಳಿತ ರೂಢ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ತಂತ್ರ ಹೆಣೆದಿವೆ ಎನ್ನಲಾಗಿದೆ. ಮತ್ತೊಂದು ಕಡೆ ತಮ್ಮನ್ನು ಸಂಪುಟದಿಂದ ಕೈಬಿಟ್ಟ ಪರಿಣಾಮ ತಮ್ಮ ಅಸಮಾಧಾನವನ್ನು ಈ ಮೂಲಕ ಹೊರ ಹಾಕಿದ್ರಾ ಅನ್ನೋ ಚರ್ಚೆಗಳು ಕಮಲ ಅಂಗಳದಲ್ಲಿ ನಡೆಯುತ್ತಿವೆ. ಇದನ್ನೂ ಓದಿ: ಬೆಂಗಳೂರಿನ ಆರೋಗ್ಯ ವ್ಯವಸ್ಥೆ ಸರಿ ಇಲ್ಲ ಅಂದ್ರು ಸಿಎಂ ಬೊಮ್ಮಾಯಿ