ಮೈಸೂರು: ನಿಮ್ಮ ದಮ್ಕಿಗೆ ಹೆದರಲ್ಲ, ನಾವೇನು ಕೈಗೆ ಬಳೆ ತೊಟ್ಟಿಕೊಂಡು ಕುಳಿತಿಲ್ಲ ಎಂದು ಸಂಸದ ಪ್ರತಾಪ್ ಸಿಂಹಗೆ ಮಾಜಿ ಸಚಿವ, ಶಾಸಕ ತನ್ವೀರ್ ಸೇಠ್ ಎಚ್ಚರಿಕೆ ನೀಡಿದ್ದಾರೆ.’
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ತನ್ವೀರ್ ಸೇಠ್, ಸಂಸದರ ಹೇಳಿಕೆ ಖಾರವಾಗಿ ಪ್ರತಿಕ್ರಿಯಿಸಿದರು. ಮೈಸೂರು ಅರಸು ರಸ್ತೆ ಮೊದಲು ಬಂತಾ ಅಥವಾ ದರ್ಗಾ ಅನ್ನೋ ಹೆಸರು ಮೊದಲು ಬಂತಾ ಅನ್ನೋ ವಿವಾದ ನ್ಯಾಯಾಲಯದಲ್ಲಿದೆ. ಯಾವುದು ಸರಿ ಅನ್ನೋದನ್ನ ನ್ಯಾಯಾಲಯ ತೀರ್ಮಾನಿಸಲಿದೆ. ಕೋರ್ಟ್ ನಲ್ಲಿರುವ ವಿಷಯವನ್ನು ಮಾತನಾಡೋದು ಸರಿ ಅಲ್ಲ. ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಬಹಿರಂಗವಾಗಿ ಜಿಲ್ಲಾಧಿಕಾರಿಗಳಿಗೆ ಬೆದರಿಕೆ ಹಾಕೋದು ಎಷ್ಟು ಸರಿ ಎಂದು ಸೇಠ್ ಪ್ರಶ್ನೆ ಮಾಡಿದ್ದಾರೆ.

ಪ್ರತಾಪ್ ಸಿಂಹ ಹೇಳಿದ್ದೇನು?
ಮೈಸೂರಿನಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಕುರಿತಾಗಿ ಪ್ರತಾಪ್ ಸಿಂಹ ಕೆಡಿಪಿ ಸಭೆಯಲ್ಲಿ ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೇವಲ ಹಿಂದೂ ಧಾರ್ಮಿಕ ಕಟ್ಟಡಗಳನ್ನು ಮಾತ್ರ ತೆರವು ಮಾಡುತ್ತಿದ್ದಿರಾ, ಇದು ತರವಲ್ಲ. ಇದುವರೆಗೂ ಎಷ್ಟು ಅನಧಿಕೃತ ದರ್ಗಾ ಮಸೀದಿಗಳನ್ನು ತೆರವು ಮಾಡಿದ್ದೀರಾ..? ಇರ್ವಿನ್ ರಸ್ತೆಯಲ್ಲಿರುವ ಮಸೀದಿ, ರಸ್ತೆ ಆಗಲೀಕರಣಕ್ಕೆ ತಡೆಯಾಗಿದೆ. ಅಲ್ಲಿನ ಗೋಪುರವನ್ನು ತೆರವು ಮಾಡಲು ನಿಮ್ಮಿಂದ ಆಗಿಲ್ಲ. ದೇವರಾಜ ರಸ್ತೆಯ ಬಳಿ ಅನಧಿಕೃತ ದರ್ಗಾವಿದೆ ಅದನ್ನು ಯಾವಾಗ ತೆರವು ಮಾಡುತ್ತಿರಾ ಎಂದು ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದ್ದರು.
ಅನಧಿಕೃತ ದರ್ಗಾ ಮಸೀದಿಗಳ ತೆರವು ನಿಮ್ಮಿಂದ ಆಗದಿದ್ದರೆ ಹೇಳಿ ನಾವೇ ರಸ್ತೆಗಿಳಿಯುತ್ತೇವೆ. ನಮ್ಮ ಮೇಲೆ ಕೇಸ್ ದಾಖಲಿಸಿದರೂ ಪರವಾಗಿಲ್ಲ. ಯಾವುದೇ ಕಾರಣಕ್ಕೂ ಹಿಂದೂ ದೇಗುಲಗಳು ಟಾರ್ಗೆಟ್ ಆಗಬಾರದು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಕಂಗನಾ ರಣಾವತ್ ಸಲ್ಲಿಸಿದ್ದ ಅರ್ಜಿ ವಜಾ