ಮನೆಯಲ್ಲಿ ಮಕ್ಕಳು ಇದ್ರೆ ಅವರು ಕೇಳುವ ತಿಂಡಿಗಳಿಗೆ ಕೊನೆಯೇ ಇರಲ್ಲ. ಪ್ರತಿದಿನ ಸಂಜೆಯಾದ್ರೆ ಇವತ್ತಿನ ಮಕ್ಕಳು ಫಾಸ್ಟ್ ಫುಡ್ ಕೇಳುತ್ತಾರೆ. ಕೊರೊನಾ ಮತ್ತು ಬದಲಾಗುತ್ತಿರುವ ವಾತಾವರಣದಲ್ಲಿ ಹೊರಗಿನ ತಿಂಡಿ ಕೊಡಿಸಲು ಪೋಷಕರಿಗೂ ಭಯ. ಪ್ರತಿದಿನ ಅವಲಕ್ಕಿ, ಉಪ್ಪಿಟ್ಟು ತಿಂದು ಬೇಸರವಾಗಿರುವ ಮಕ್ಕಳಿಗೆ ಸಬ್ಬಕ್ಕಿ ವಡೆ ಮಾಡಿ ಕೊಡಿ. ಸಬ್ಬಕ್ಕಿ ವಡೆ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು
- ಸಬ್ಬಕ್ಕಿ – 1 ಕಪ್ (100 ಗ್ರಾಂ)
- ಆಲೂಗಡ್ಡೆ – 2 ರಿಂದ 3 (ಮಧ್ಯಮ ಗಾತ್ರದ್ದು)
- ಹಸಿ ಮೆಣಸಿನಕಾಯಿ – 2
- ಕೋತಂಬರಿ ಸೊಪ್ಪು
- ಕಡಲೆಕಾಯಿ ಬೀಜದ ಪುಡಿ (ಶೇಂಗಾ ಪುಡಿ)
- ಜೀರಿಗೆ – 1 ಟೀ ಸ್ಪೂನ್
- ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ
- ಮೊದಲಿಗೆ ಸಬ್ಬಕ್ಕಿಯನ್ನು ಎರಡು ಗಂಟೆ ನೀರಿನಲ್ಲಿ ನೆನಸಿಡಿ
- ತದನಂತರ ಸಬ್ಬಕ್ಕಿಯಿಂದ ನೀರು ಬೇರ್ಪಡಿಸಿ, ಅದಕ್ಕೆ ಬೇಯಿಸಿದ ಆಲೂಗಡ್ಡೆಯನ್ನು ಸೇರಿಸಿ ಚೆನ್ನಾಗಿ ಸ್ಮ್ಯಾಶ್ ಮಾಡಿ.
- ಇದೇ ಮಿಶ್ರಣಕ್ಕೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಕೋತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ ಸೇರಿಸಿ. ನಂತರ ಜೀರಿಗೆ, ಕಡಲೆಕಾಯಿ ಬೀಜದ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಎಲ್ಲವನ್ನು ಮಿಕ್ಸ್ ಮಾಡಿಕೊಳ್ಳಬೇಕು. ಮಿಶ್ರಣ ಮಾಡಿಕೊಳ್ಳುವಾಗ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಿರಬೇಕು.
- ಸ್ಟೌವ್ ಆನ್ ಮಾಡಿಕೊಂಡು ಒಂದು ಪ್ಯಾನ್ ಇರಿಸಿ ಒಂದು ಕಪ್ ಎಣ್ಣೆ ಹಾಕಿ.
- ಎಣ್ಣೆ ಬಿಸಿಯಾಗುತ್ತಿದ್ದಂತೆ ಮಿಶ್ರಣವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ, ಅಂಗೈಯಲ್ಲಿ ವಡೆ ಆಕಾರದಲ್ಲಿ ತಟ್ಟಿ ಫ್ರೈ ಮಾಡಿದ್ರೆ ರುಚಿಯಾದ ಸಬ್ಬಕ್ಕಿ ವಡೆ ರೆಡಿ. ಇದನ್ನೂ ಓದಿ: ಚಟಾಪಟ್ ಅಂತ ತಯಾರಿಸಿ ರುಚಿಯಾದ ಟೊಮಾಟೋ ರಸಂ