ಬೆಂಗಳೂರು : 2021-21 ರ ಸಾಲಿನ 6 ನೇ ತರಗತಿಯ ಸಮಾಜ ವಿಜ್ಙಾನ (ಭಾಗ – 1) ವಿಷಯದಲ್ಲಿ, ಪಾಠ 7 ರಲ್ಲಿ ಉಲ್ಲೇಖವಿರುವ ‘ಹೊಸ ಧರ್ಮಗಳ ಉದಯ’ ಎಂಬ ಪಠ್ಯವನ್ನು ರಾಜ್ಯಾದ್ಯಂತ ಶಿಕ್ಷಕರು ಶಾಲೆಯಲ್ಲಿ ಭೋಧಿಸಬಾರದು ಎಂದು ಕರ್ನಾಟಕ ಸರ್ಕಾರ 2021 ರ ಫೆಬ್ರುವರಿಯಲ್ಲಿ ಆದೇಶ ಹೊರಡಿಸಿತ್ತು.

ಈ ಆದೇಶಕ್ಕೆ ಸ್ಪಷ್ಟ ಕಾರಣವನ್ನು ಸರ್ಕಾರ ನೀಡಿಲ್ಲ. ಆದರೆ ಈ ಹಿಂದೆ ಈ ಪಾಠಗಳು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗಾಗಿ ಆರನೇ ತರಗತಿ ಸಮಾಜವಿಜ್ಞಾನ ಪಠ್ಯಪುಸ್ತಕದ ಭಾಗವಾಗಿರುವ ವೇದ ಕಾಲದ ಸಂಸ್ಕೃತಿ ಕುರಿತು ಪಾಠ ಮಾಡದಂತೆ ಶಿಕ್ಷಕರಿಗೆ ಆದೇಶ ಹೊರಡಿಸುವುದಾಗಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಹೇಳಿದ್ದರು.

ವೈಧಿಕ ಧರ್ಮಗಳ ಆಚರಣೆಗಳಲ್ಲಿರುವ ದೋಷಗಳೆ ಹೊಸ ಹೊಸ ಧರ್ಮಗಳಿಗೆ ಕಾರಣವಾಯಿತು ಎಂದು ಪರೋಕ್ಷವಾಗಿ ಹೇಳುವಂತಿರುವ ಈ ಪಠ್ಯ ಭಾಗವನ್ನು ಕಡಿತಗೊಳಿಸಲು ಕರ್ನಾಟಕ ಸರ್ಕಾರ ಪರಿಶೀಲನೆ ಸಮಿತಿ ರಚಿಸಿದೆ. ಈ ಸಮಿತಿಯಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ರೋಹಿತ್ ಚಕ್ರತೀರ್ಥ ರವರಿಗೆ ಅಧ್ಯಕ್ಷತೆಯನ್ನು ನೀಡಲಾಗಿದೆ.
ಇದನ್ನೂ ಓದಿ : ಪುರುಷೋತ್ತಮನಾಗಿ ಎಂಟ್ರಿ ಕೊಡಲಿದ್ದಾರೆ ಜಿಮ್ ರವಿ
ಈ ಸಮಿತಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಮುಖ್ಯಸ್ಥ ಡಾ ರಾಜಾ ರಾಮ ಹೆಗಡೆ, ಹಗರಿಬೊಮ್ಮನಹಳ್ಳಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಪ್ರಾಂಶುಪಾಲ ರಂಗನಾಥ್, ಮಿಥಿಕ್ ಸೊಸೈಟಿಯ ಸಂಶೋಧಕ ವಿಠಲ್ ಪೋತೆದಾರ್, ಪ್ರಾಣಿ ಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಡಾ ಎಮ್ ಜೆ ಸುಂದರ್ ರಾವ್, ಕರ್ನಾಟಕ ಕೇಂದ್ರಿಯ ವಿದ್ಯಾಲಯದ ಜಾನಪದ ಶಾಸ್ತ್ರ ಬುಡಕಟ್ಟು ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ರೋಹಿಣ್ಯಾಕ್ಷ ಸೇರಿದಂತೆ ಒಟ್ಟು 16 ಮಂದಿ ಈ ಸಮಿತಿಯಲ್ಲಿ ಇದ್ದಾರೆ.
