ಜಕಾರ್ತ (ಸೆ.8): ಇಂಡೊನೇಷ್ಯಾದ ಜಾವಾ ದ್ವೀಪದ ಜೈಲಿನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 41 ಖೈದಿಗಳು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮುಂಜಾನೆ ಸುಮಾರು 2 ರಿಂದ 3 ಗಂಟೆಯ ಅಂತರದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಖೈದಿಗಳು ಮಲಗಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಇನ್ನು ಸ್ಥಳಕ್ಕೆ ರಕ್ಷಣಾ ತಂಡಗಳು ಆಗಮಿಸಿ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಹೆಚ್ಚಾಗಿ ಮಾದಕದ್ರವ್ಯ ಆರೋಪದ ಮೇಲೆ ಜೈಲು ಶಿಕ್ಷೆಗೆ ಗುರಿಯಾದ ಕೈದಿ ಖೈದಿಗಳನ್ನು ಹೊಂದಿದ್ದ ಒಂದು ಬ್ಲಾಕ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ಇನ್ನು ಕಾರಾಗೃಹದಲ್ಲಿದ್ದ ಖೈದಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ಬೆಂಕಿ ಅವಘಡಕ್ಕೆ ಕಾರಣ ತಿಳಿಯಲು ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ ಎಂದು ಜೈಲು ಇಲಾಖೆಯ ವಕ್ತಾರ ರಿಕಾ ಅಪ್ರಿಯಂತಿ ತಿಳಿಸಿದ್ದಾರೆ.
1,225 ಖೈದಿಗಳನ್ನು ಇಡುವಷ್ಟು ಸಾಮರ್ಥ್ಯವಿರುವ ತಂಗೇರಂಗ ಜೈಲಿನಲ್ಲಿ 2,000ಕ್ಕಿಂತಲೂ ಹೆಚ್ಚು ಜನರಿದ್ದಾರೆ. ಬೆಂಕಿ ಸಂಭವಿಸಿದಾಗ ಬ್ಲಾಕ್ ಸಿ ನಲ್ಲಿ 122 ಅಪರಾಧಿಗಳಿದ್ದರು. ಬೆಂಕಿ ನಿಯಂತ್ರಿಸಲು ನೂರಾರು ಪೋಲಿಸರು ಮತ್ತು ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಅಪ್ರಿಯಂತಿ ತಿಳಿಸಿದ್ದಾರೆ.
ಇದನ್ನೂ ಓದಿ : ಮಂಗಳೂರಿನಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಉದ್ಘಾಟನೆ: ಶಾಸಕ ವೇದವ್ಯಾಸ್ ಕಾಮತ್
ಇನ್ನು ಮತ್ತೊಂದು ಮೂಲದ ಪ್ರಕಾರ ಜೈಲಿನ ಅವ್ಯವಸ್ಥೆಯಿಂದ ರೊಚ್ಚಿಗೆದ್ದಿದ್ದ ಖೈದಿಗಳೇ ಜೈಲಿಗೆ ಬೆಂಕಿ ಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೆ ಬೆಂಕಿ ಅವಘಡ ವೇಳೆ ಹಲವು ಖೈದಿಗಳು ಪರಾರಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.