ಮುಂಬೈ (ಸೆ.8): ಸೆಲ್ಮೋನ್ ಭೋಯ್ ಎಂಬ ಹೆಸರಿನ ಗೇಮ್ ವಿರುದ್ಧ ಬಾಲಿವುಡ್ ನಟ ಸಲ್ಮಾನ್ ಖಾನ್ ಹೋರಾಟಕ್ಕೆ ಇಳಿದಿದ್ದರು. ಈ ಗೇಮ್ 2002ರಲ್ಲಿ ನಡೆದಿದ್ದ ಸಲ್ಮಾನ್ ಖಾನ್ರ ಹಿಟ್ & ರನ್ ಕೇಸ್ ಆಧರಿಸಿ ನಿರ್ಮಿಸಲಾಗಿದೆ. ದೇಶಮಟ್ಟದಲ್ಲಿ ಭಾರೀ ಸದ್ದು ಮಾಡಿದ್ದ ಈ ಪ್ರಕರಣದಿಂದ ಸಲ್ಮಾನ್ ಖಾನ್ ಆರೋಪದಿಂದ ಮುಕ್ತರಾಗಿದ್ದರು. ಇದೀಗ ಸಲ್ಮಾನ್ ಖಾನ್ ಮೊಕದ್ದಮೆ ಆಧರಿಸಿ ಈ ಗೇಮ್‌ಗೆ ಮುಂಬೈ ಸಿವಿಲ್ ಕೋರ್ಟ್ ತಾತ್ಕಾಲಿಕ ನಿರ್ಬಂಧ ಹೇರಿದೆ.

ಕೆಲವೊಂದು ವರದಿಗಳ ಪ್ರಕಾರ, ಸೆಲ್ಮೋನ್ ಭೋಯ್ ಗೇಮ್ ಕಂಪನಿಗೆ, ಸಲ್ಮಾನ್ ಖಾನ್ಗೆ ಸಂಬಂಧಿಸಿದ ಗೇಮ್ ರಚನೆ, ಅಭಿವೃದ್ಧಿ ಅಥವಾ ಮರುಸೃಷ್ಠಿ ಮಾಡದಂತೆ ಆದೇಶ ನೀಡಿದೆ. ಗೂಗಲ್ ಪ್ಲೇ ಸ್ಟೋರ್ ಹಾಗೂ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಈ ಗೇಮ್ ಇಡದಂತೆ ಕೋರ್ಟ್ ಸೂಚನೆ ನೀಡಿದೆ.

ಗೇಮ್ ನಿರ್ಮಾಣ ಸಂಸ್ಥೆಗೆ ಸೂಚನೆ ನೀಡಿದ ಸಿವಿಲ್ ಕೋರ್ಟ್, ಸಲ್ಮಾನ್ ಖಾನ್ ಒಪ್ಪಿಗೆ ಪಡೆಯದೇ ಈ ರೀತಿಯ ಗೇಮ್ ನಿರ್ಮಾಣ ಮಾಡಲು ಸಾಧ್ಯವಿಲ್ಲ. ದೂರುದಾರ ವ್ಯಕ್ತಿಯ ಅನುಮತಿ ಇಲ್ಲದೇ ಅವರ ಫೋಟೋವನ್ನು ಹೋಲುವಂತಹ ಗೇಮ್ನ್ನು ಅಭಿವೃದ್ಧಿ ಮಾಡಬಾರದು. ಇದು ಅವರ ಖಾಸಗೀತನದ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಹೇಳಿದೆ.