ಮುಂಬೈ (ಸೆ.7): ಬಾಲಿವುಡ್ನ ಹಲವು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ರಜತ್ ಬೇಡಿ ಅವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಜತ್ ಬೇಡಿ ಅವರು ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವಾಗ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ 39 ವರ್ಷದ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದರಿಂದ ಆ ವ್ಯಕ್ತಿಯನ್ನು ಕೂಪರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪ್ರಕರಣ ಸಂಬಂಧ ಆರೋಪ ಕೇಳಿಬಂದಿದ್ದು ಡಿಎನ್ ನಗರ್ ಪೊಲೀಸ್ ಠಾಣೆಯಲ್ಲಿ ರಜತ್ ಬೇಡಿ ವಿರುದ್ಧ ಕೇಸ್ ದಾಖಲಿಸಲಾಗಿದೆ. ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ರಾಜೇಶ್ ಎಂದು ಗುರುತಿಸಲಾಗಿದೆ. ಇದುವರೆಗೂ ಪೊಲೀಸರು ರಜತ್ ಬೇಡಿಯನ್ನು ಬಂಧಿಸಿಲ್ಲ.

ಅಪಘಾತ ನಡೆದ ಮೇಲೆ ಗಾಯಾಳುಗನ್ನು ಸ್ವತಃ ರಜತ್ ಬೇಡಿಯವರೇ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಡಿಎನ್ ನಗರ ಪೊಲೀಸ್ ಠಾಣೆಗೆ ಬಂದು ವಿಷಯ ತಿಳಿಸಿದ್ದಾರೆ. ಇನ್ನು ಅಪಘಾತಕ್ಕೆ ಒಳಗಾಗಿರುವ ರಾಜೇಶ್ ಕುಟುಂಬಕ್ಕೆ ಸಹಾಯ ಮಾಡುವುದಾಗಿ ರಜತ್ ಬೇಡಿ ಭರವಸೆ ನೀಡಿದ್ದರು. ಆದರೆ ಆಸ್ಪತ್ರೆಗೆ ದಾಖಲಿಸಿ ಹೋದ ಬಳಿಕ ಅವರು ಮತ್ತೆ ಆಸ್ಪತ್ರೆಯ ಕಡೆಗೆ ತಲೆ ಹಾಕಿಲ್ಲ, ನಮ್ಮನ್ನು ಪಾಟಿಸಿಲ್ಲ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಸಿಸಿ ಕ್ಯಾಮರಾ ಆಧರಿಸಿ ಪ್ರಕರಣವನ್ನು ಪರಿಶೀಲಿಸಿ, ಸಾಕ್ಷಿಗಳನ್ನು ಪತ್ತೆ ಹಚ್ಚುತ್ತೇವೆ ಎಂದು ಡಿಎನ್ ನಗರ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ,