ಲಕ್ನೋ : ಎಲ್ಲರ ತಲೆಯ ಮೇಲೆ ಹಸಿರು ಟೋಪಿ, ಕೆಲವರ ಕೈಯಲ್ಲಿ ಬಿಳಿ ಧ್ವಜವಿದೆ ಮತ್ತೆ ಕೆಲವು ಜನರು ಕೆಂಪು ಮತ್ತು ಹಸಿರು ಬಣ್ಣದ ಬಾವುಟಗಳನ್ನು ಹಿಡಿದಿದ್ದಾರೆ, ಎಲ್ಲರ ಬೇಡಿಕೆ ಒಂದೇ, ಎಲ್ಲರ ಬಾಯಲ್ಲಿ ಒಂದೇ ಮಾತು ಅದುವೇ “ಕೃಷಿ ಕಾನೂನುಗಳನ್ನು ಹಿಂದಕ್ಕೆ ತೆಗೆದುಕೊಳ್ಳಿ”

ಯುಪಿ, ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವಾರು ರಾಜ್ಯಗಳಿಂದ ಮಹಾಪಂಚಾಯತ್‌ನಲ್ಲಿ ಸಹಾಸ್ರಾರು ಅನ್ನದಾತರು ಭಾಗವಹಿಸಿದ್ದರು.
ರಾಜ್ಯದ ರೈತರು ತಮ್ಮ ತಮ್ಮ ಆಚರಣೆ ಮತ್ತು ಸಂಸ್ಕೃತಿಯ ಪ್ರಕಾರ ವಸ್ತ್ರ ಧರಿಸಿದ್ದರು. ಇದು ಪಂಚಾಯತ್ ಸ್ಥಳದಲ್ಲಿದ್ದ ನೋಟವಾಗಿತ್ತು. ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಮುಜಫರ್ ನಗರದಲ್ಲಿ ಮಹಾಪಂಚಾಯತ್ ನಡೆಸುವ ಮೂಲಕ ರೈತರು ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ.
ಇದನ್ನೂ ಓದಿ : ಮಂಗಳಾ ಮಿಂಚಿನ ಸಂಚಾರ, ಬಿಜೆಪಿಗೆ ಬೆಳಗಾವಿ ಕುಂದಾ – ಕಾಂಗ್ರೆಸ್ ಎಡವಿದ್ದೆಲ್ಲಿ?
ಕಳೆದ ಮೂರು ದಶಕಗಳಲ್ಲಿ, ಪ್ರತಿ ಸಾರಿಯೂ ರೈತರು ಮಹಾಪಂಚಾಯತ್ ಮೂಲಕ ಮುಜಾಫರ್ನಗರದಲ್ಲಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದಾಗ, ಆ ರಾಜ್ಯದಿಂದ ಸರ್ಕಾರ ತನ್ನ ಅಧಿಕಾರ ಕಳೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ 2022 ರ ಚುನಾವಣೆಯಲ್ಲಿ ಕಿಸಾನ್ ಮಹಾಪಂಚಾಯತ್ ಇಂದಿನ ಈ ನಡೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಭಾನುವಾರ ಮುಜಫರ್ನಗರದ ಸರ್ಕಾರಿ ಕಾಲೇಜು (ಜಿಐಸಿ) ಮೈದಾನದಲ್ಲಿ ಮಹಾಪಂಚಾಯತ್ನಲ್ಲಿ ಜಮಾಯಿಸಿದ ರೈತರು ಒಂದು ಮಿನಿ ಇಂಡಿಯಾವನ್ನೆ ಸೃಷ್ಟಿಸಿದಂತಾಗಿತ್ತು. ಇಷ್ಟು ಭಾರಿ ಪ್ರಮಾಣದ ರೈತರು ಒಗ್ಗೂಡಿ ರಾಜ್ಯದಿಂದ ಯೋಗಿ ಮತ್ತು ಕೇಂದ್ರದಿಂದ ಮೋದಿ ಸರ್ಕಾರವನ್ನು ಕಿತ್ತುಹಾಕುವುದಾಗಿ ಘೋಷಿಸಿದರು.

ಅಖಿಲ ಭಾರತ ಕಿಸಾನ್ ಸಭಾದ ಸಚ್ಚಿದಾನಂದ ಕಂದಾರಿ, ಸೋಮನಾಥ ಸಿಂಗ್, ರಾಜುಬ್ ಅಲಿ ಮತ್ತು ಶ್ಯಾಮಲಾಲ್ ಪಶ್ಚಿಮ ಬಂಗಾಳದಿಂದ ಕೆಂಪು ಬಾವುಟ ಮತ್ತು ಬ್ಯಾನರ್ ಗಳನ್ನು ಹೊತ್ತು ಬಂದಿದ್ದರು. ಈ ವೇಳೆ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಭತ್ತ, ಆಲೂಗಡ್ಡೆ ಮತ್ತು ಸೆಣಬಿನ ಬೆಳೆ ಅಧಿಕವಾಗಿದೆ, ಆದರೆ ಅವುಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಈ ಕಣ್ಣಾ ಮುಚ್ಚಾಲೆ ಆಟವು ಇಡೀ ರಾಜ್ಯದಲ್ಲಿ ನಡೆಯುತ್ತಿದೆ, ಇದರಿಂದಾಗಿ ರೈತರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಬಂದೊದಗಿದೆ ಎಂದು ಅವರು ಹೇಳಿದರು.
ಇನ್ನು ಈ ಕುರಿತು ಬಿಜೆಪಿಯ ವರುಣ್ ಗಾಂಧಿ ಟ್ವೀಟ್ ಮಾಡಿದ್ದು, ಸರ್ಕಾರವು ರೈತರ ನೋವನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳೀದ್ದಾರೆ.
ಸಮಾವೇಶ ಉದ್ದೇಶಿಸಿ ಮಾತನಾಡಿದ, ರಾಕೇಶ್ ಟಿಕಾಯತ್, ಕಾಯ್ದೆಗಳನ್ನು ಹಿಂಪಡೆಯುವವರೆಗೂ ಮನೆಗೆ ಮರುಳುವ ಮಾತೇ ಇಲ್ಲ. ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು. ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಬದ್ಧಗೊಳಿಸಬೇಕು. ರೈತರ ಮೇಲಿರುವ ಪ್ರಕರಣಗಳನ್ನು ಕೈಬಿಡಬೇಕೆಂದು ಅವರು ಆಗ್ರಹಿಸಿದರು. ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರಾದ ದರ್ಶನ್ ಪಾಲ್ ಇದೇ ವೇಳೆ ಸೆ.27ರಂದು ಭಾರತ್ ಬಂದ್ ಗೆ ಕರೆ ನೀಡಿದರು. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ 300 ರೈತ ಸಂಘಟನೆಗಳಿಂದ ರೈತರು ಸಮಾವೇಶದಲ್ಲಿ ಭಾಗವಹಿಸಿದ್ದರು.