ಬೆಂಗಳೂರು (ಸೆ.6): ರಾಜ್ಯದಲ್ಲಿ ಬಿಜೆಪಿ ಪರ ಇರುವುದು ಮಹಾನಗರ ಪಾಲಿಕೆಯ ಫಲಿತಾಂಶದ ಚುನಾವಣೆಯಿಂದ ಸಾಬೀತಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ರು. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಹ್ಯಾಟ್ರಿಕ್ ಬಾರಿಸಿದರೆ, 25 ವರ್ಷಗಳ ನಂತರ ಬೆಳಗಾವಿ ಪಾಲಿಕೆಯಲ್ಲಿ ಪೂರ್ಣ ಬಹುಮತದೊಂದಿಗೆ ಗೆಲುವು ಸಾಧಿಸಿದ್ದೇವೆ. ಗೆಲುವಿನ ಹಿಂದೆ ಸಿಎಂ ಬಯವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ನಾಯಕತ್ವ ಇದೆ ಮತದಾರರು ಬಿಜೆಪಿ ಪರವಾಗಿದ್ದು, ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದರು.

ಪ್ರಾಂತ್ಯ , ಭಾಷೆ ಇವೆಲ್ಲಕ್ಕಿಂತಲೂ ಮುಖ್ಯವಾಗಿ ರಾಷ್ಟ್ರೀಯ ವಿಚಾರಕ್ಕೆ ಅಲ್ಲಿಯ ಜನ ಬೆಂಬಲಿಸಿದ್ದಾರೆ ಇದರಿಂದ ನಮಗೆ ತುಂಬ ಸಂತೋಶ ಆಗಿದೆ. ಜನ ಯಾರು ಆಡಳಿತ ಮತ್ತು ಸಂಘಟನೆಯ ಮೂಲಕ ಚೆನ್ನಾಗಿ ಕೆಲಸ ಮಾಡುತ್ತಾರೆ. ಅವರನ್ನು ಗಮನಿಸುತ್ತಾರೆ. ಅದೇ ರೀತಿ ಜನ ನಮ್ಮನ್ನು ಮೆಚ್ಚಿದ್ದಾರೆ. ಬಿಜೆಪಿಯ ಈ ಗೆಲುವಿನ ಬಗ್ಗೆ ಕಾಂಗ್ರೆಸ್ ನವರು ಮಾತನಾಡಲಿ ಎಂದರು.
ಕೇಂದ್ರ ನಾಯಕರ ಅಭಿಪ್ರಾಯಕ್ಕೆ ನಾವು ಸದಾ ಬದ್ಧರಾಗಿರುತ್ತೇವೆ. ರಾಜ್ಯದ ಎಲ್ಲಾ ನಾಯಕರು ಒಗ್ಗೂಡಿ ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ಈವರೆಗೂ ನಾಲ್ಕು ಬಾರಿ ಬಿಜೆಪಿ ಅಧಿಕಾರ ಹಿಡಿದರೂ ಒಮ್ಮೆಯೂ ಪೂರ್ಣ ಬಹುಮತ ಸಾಧಿಸಿಲ್ಲ. ಹಾಗಾಗಿ ಪೂರ್ಣ ಬಹುಮತ ಪಡೆಯಲು ಸಂಘಟಿತರಾಗಿ ಕೆಲಸ ಮಾಡುತ್ತೇವೆ ಎಂದರು. ಈ ನಿಟ್ಟಿನಲ್ಲಿ ಕೇಂದ್ರ ವರಿಷ್ಠರು ಮಾಡುವ ತೀರ್ಮಾನವನ್ನು ನಾವು ಸ್ವೀಕರಿಸಿ ಕೆಲಸ ನಿರ್ವಹಿಸುತ್ತೇವೆ ಎಂದು ಹೇಳಿದರು.