ಬೆಂಗಳೂರು : ರಾಷ್ಟ್ರೀಯ ಪೌಷ್ಟಿಕ ಆಹಾರಗಳ ಸಪ್ತಾಹ ಆಚರಣೆ ಇದೇ ಸೆಪ್ಟೆಂಬರ್ ಒಂದರಿಂದ ಏಳು ದಿನಗಳವರೆಗೆ ಅಂದರೆ ಸೆಪ್ಟೆಂಬರ್ ಏಳನೇ ತಾರೀಕಿನವರೆಗೂ ನಡೆಯಲಿದ್ದು ದೇಶದಾದ್ಯಂತ ಇರುವ ಪ್ರತಿಯೊಬ್ಬ ನಾಗರೀಕನಿಗೂ ಉತ್ತಮ ಆಹಾರ ಪದ್ಧತಿ ಮತ್ತು ಉತ್ತಮ ಜೀವನ ಶೈಲಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಭಾರತ ಸರ್ಕಾರದ ವತಿಯಿಂದ ಆಚರಿಸಲಾಗುತ್ತದೆ.

ಹಾಗೇ ನೋಡುವುದಾದರೆ ಒಬ್ಬ ವ್ಯಕ್ತಿ ತನ್ನ ಆರೋಗ್ಯದ ಕಾಳಜಿ ವಹಿಸುವುದು ಮತ್ತು ಉತ್ತಮ ಆಹಾರ ಪದ್ದತಿಯನ್ನು ಅಳವಡಿಸಿಕೊಳ್ಳಲು ಮತ್ತೊಬ್ಬರು ಹೇಳುವ ಅಗತ್ಯವೇ ಇಲ್ಲ. ಆದರೆ ಇಂದಿನ ಈ ಮುಂದುವರೆದ ಯುಗದಲ್ಲಿ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಮತ್ತು ಯಾವಾಗಲೂ ಬ್ಯುಸಿಯಾಗಿರುವ ಕಾರ್ಯ ವೈಖರಿಗಳು ಈ ಮನುಷ್ಯನಿಗೆ ತನ್ನ ಬಗ್ಗೆ ಕಾಳಜಿ ಮಾಡಿಕೊಳ್ಳುವುದರ ಬಗ್ಗೆ ಸಮಯವೇ ಸಿಗದಂತೆ ಮಾಡಿದೆ.
ಮೊದಲು ನಾವು ಉತ್ತಮ ಆರೋಗ್ಯ ಎಂದರೇನು ಅನ್ನುವ ಬಗ್ಗೆ ತಿಳಿದುಕೊಳ್ಳೋಣ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಉತ್ತಮ ಆರೋಗ್ಯವೆಂದರೆ ಕೇವಲ ರೋಗಗಳಿಂದ ಮುಕ್ತವಾಗಿರುವುದು ಅಥವಾ ನನಗೆ ಯಾವುದೇ ರೋಗಗಳೇ ಇಲ್ಲ ಅನ್ನುವುದಲ್ಲ, ನಿಜವಾದ ಉತ್ತಮ ಆರೋಗ್ಯ ಅಂದರೆ, ಒಬ್ಬ ಮನುಷ್ಯ ಶಾರೀರಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಒಳ್ಳೆಯ ಸಮತೋಲನ ಹೊಂದಿರುವುದನ್ನು ಆರೋಗ್ಯವಂತ ಎಂದು ಕರೆಯಬಹುದು.
ಮೊನ್ನೆ ಒಬ್ಬ ವೈದ್ಯರು ಮನುಷ್ಯನ ಸ್ವಾಭಾವಿಕ ವಯಸ್ಸು ಅಥವಾ ಆಯಸ್ಸು 120 ವರ್ಷಗಳು ಎಲ್ಲರಿಗೂ ಸಮವಾಗಿ ಇರುತ್ತೆ ಒಂದು ವೇಳೆ ಆಯಸ್ಸು ಮುಗಿಯುವ ಮುನ್ನ ಒಬ್ಬ ಮನುಷ್ಯ ಸತ್ತು ಹೋದರೆ ಬಹುತೇಕ ಸಂಧರ್ಭದಲ್ಲಿ ಅವನ ನಿರ್ಲಕ್ಷತನವೇ ಕಾರಣ ಅಂತ ಹೇಳಿದರು. ಅವನು ಅನುಸರಿಸುವ ಜೀವನ ಶೈಲಿ, ಅಳವಡಿಸಿಕೊಳ್ಳುವ ಅಭ್ಯಾಸಗಳು ಮತ್ತು ಉಪಯೋಗಿಸುವ ಆಹಾರ ಪದ್ದತಿಯ ಮೇಲೆ ಅವನ ದೇಹಕ್ಕೆ ಬೇಗ ವಯಸ್ಸಾಗುತ್ತಾ, ದೇಹದ ಒಂದೊಂದು ಕೋಶಗಳು, ಪ್ರತಿಯೊಂದು ಅಂಗಾಂಗಗಳು ತಮ್ಮ ತಮ್ಮ ಕಾರ್ಯ ಕ್ಷಮತೆ ಕಡಿಮೆಗೊಳಿಸುತ್ತ, ಅತಿಯಾದ ದಣಿವು, ಉಸಿರಾಟ ಸಮಸ್ಯೆ ಮತ್ತು ಇನ್ನಿತರ ಸಮಸ್ಯೆಗಳನ್ನು ಸೃಷ್ಟಿಸುತ್ತವೆ.
ಆಶ್ಚರ್ಯಕರ ಸಂಗತಿಯೊಂದನ್ನು ಹೇಳುತ್ತೇನೆ ಕೇಳಿ, ಒಂದು ಮನೆಯಲ್ಲಿ ಒಂದು ವಾಹನ ಇದೆ ಅಂತ ಭಾವಿಸಿ, ಆ ವಾಹನದ ಮಾಲೀಕ ತನ್ನ ವಾಹನ ಯಾವಾಗಲೂ ಚೆನ್ನಾಗಿರಬೇಕು, ಏನು ಸಮಸ್ಯೆ ಬರಬಾರದು ಅಂತ ಸಮಸ್ಯೆಗಳು ಇಲ್ಲದ್ದಿದ್ದರು ಕಾಲ ಕಾಲಕ್ಕೆ ಮೆಕ್ಯಾನಿಕ್ ಹತ್ತಿರ ಹೋಗಿ ಸರ್ವಿಸ್ ಮಾಡಿಸಿಕೊಂಡು ಬರುತ್ತಾನೆ, ಒಂದು ವೇಳೆ ಅಚಾನಕ್ಕಾಗಿ ಏನಾದ್ರು ರಿಪೇರಿ ಬಂದಾಗ ಅದನ್ನು ಸರಿಪಡಿಸಿಕೊಳ್ಳಲು ಗ್ಯಾರೇಜಿಗೆ ಹೋಗುತ್ತಾನೆ. ಒಂದು ಐವತ್ತು ಸಾವಿರ ಲಕ್ಷ ಬೆಲೆ ಬಾಳುವ ಒಂದು ವಸ್ತುವಿಗೆ ಅಷ್ಟೊಂದು ಕಾಳಜಿ ವಹಿಸುವ ಈ ಮನುಷ್ಯ, ಬೆಲೆನೆ ಕಟ್ಟಲಾಗದ ಒಂದು ವಾಹನ ಅದುವೇ ನಮ್ಮ ದೇಹ ಮತ್ತು ಇನ್ನಿತರ ಅಂಗಾಂಗಗಳು ಇವುಗಳ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೇ ನಿರ್ಲಕ್ಷ ತೋರುತ್ತಾನೆ. ತನ್ನ ದೇಹದ ನಿರ್ವಹಣೆ, ತನ್ನ ಅಂಗಾಂಗಗಳ ಬೇಕು ಬೇಡಗಳನ್ನು ತಿಳಿದು ಅವುಗಳನ್ನು ಸರಿಯಾದ ಕ್ರಮದಲ್ಲಿ ಪೂರೈಸದೇ ಏನಾದರೂ ರೋಗ-ರುಜಿನಗಳು ಬಂದಾಗ ಮಾತ್ರ ಆಸ್ಪತ್ರೆ ಅನ್ನುವ ಗ್ಯಾರೇಜಿಗೆ ಹೋಗುತ್ತಾನೆ. ಇದರಿಂದಾಗಿಯೇ 120 ವರ್ಷ ಸುದೀರ್ಘವಾದ ಆಯಸ್ಸು ಹೊಂದಿದ್ದರು ಅದನ್ನು ಪೂರೈಸಿಕೊಳ್ಳಲಾಗದೆ ಹೊಸ ಹೊಸ ರೋಗಗಳನ್ನು ತಂದುಕೊಳ್ಳುತ್ತಾ ಕೊನೆಗೆ ತನ್ನ ಜೀವನವನ್ನು ಮುಗಿಸಿಕೊಳ್ಳುತ್ತಾನೆ.
ಹಾಗಾಗಿ ಆತ್ಮೀಯ ವೀಕ್ಷಕರೇ, ನಾವು ನಮ್ಮ ಆರೋಗ್ಯ ಮತ್ತು ಆಹಾರ ಪದ್ಧತಿಗಳನ್ನು ಉತ್ತಮವಾದ ಒಳ್ಳೆಯ ಅಭ್ಯಾಸಗಳಿಂದ ರೂಢಿ ಮಾಡಿಕೊಂಡರೆ ನಮ್ಮ ದೇಹವನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದರೊಂದಿಗೆ ನಮ್ಮ ಮನಸ್ಸನ್ನು ಸಹ ನಿರಂತರವಾಗಿ ಪ್ರಶಾಂತವಾಗಿಟ್ಟುಕೊಳ್ಳಬಹುದು.
ಹಾಗಾದರೆ ಉತ್ತಮ ಆರೋಗ್ಯ ಅಥವಾ ಉತ್ತಮ ಆಹಾರ ಪದ್ಧತಿಗಳನ್ನು ಹೇಗೆ ಅನುಸರಿಸಬೇಕು ಅನ್ನುವುದನ್ನ ನಾವು ನಿಮಗೆ ಇಂದಿನ ಈ ಲೇಖನದಲ್ಲಿ ತಿಳಿಸುತ್ತೇವೆ.
ಉತ್ತಮ ಆರೋಗ್ಯಕ್ಕೆ ಕೇವಲ ನಾಲ್ಕು ಆಧಾರ ಸ್ತಂಬಗಳಿವೆ.
ದಿನವೂ ನಿಯಮಿತ ವ್ಯಾಯಾಮ ಮಾಡುವುದು – ಹೌದು ವೀಕ್ಷಕರೇ, ನಮ್ಮ ದೇಹ ಮತ್ತು ಅದರ ಪ್ರತಿಯೊಂದು ಭಾಗಗಳು ಎಷ್ಟು ಚಲಿಸುತ್ತ ಇರುತ್ತವೆಯೋ ಅಷ್ಟು ಆರೋಗ್ಯವಾಗಿರುತ್ತವೆ. ಅದಕ್ಕಾಗಿಯೇ ದಿನನಿತ್ಯ ಕನಿಷ್ಠ ಅರ್ಧ ಘಂಟೆ ವಾಕ್ ಮಾಡುವುದಾಗಲಿ, ಹೆಡ್ ಟು ಟೊ ವ್ಯಾಯಾಮ ಮಾಡುವುದಾಗಲಿ ಅಥವಾ ಸೂರ್ಯ ನಮಸ್ಕಾರ ಮಾಡುವುದನ್ನಾಗಲಿ ರೂಡಿಸಿಕೊಂಡರೆ ನಮ್ಮ ದೇಹದ ಎಲ್ಲ ಭಾಗಗಳಿಗೂ ರಕ್ತದ ಮೂಲಕ ಆಮ್ಲಜನಕ ಪೂರೈಕೆಯಾಗಿ ನಮ್ಮ ದೇಹವನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಲು ನೆರವಾಗುತ್ತದೆ.
ಹಾಗೆಯೇ ನಾವು ತಿನ್ನುವ ಆಹಾರದಲ್ಲಿನ ಕ್ಯಾಲೋರಿಗೂ ನಮ್ಮ ದೇಹಕ್ಕೆ ಅಗತ್ಯವಿರುವ ಕ್ಯಾಲೋರಿಗಳ ಮಧ್ಯ ಅಸಮತೋಲನವಾದಾಗ, ನಮ್ಮ ದೇಹದಲ್ಲಿನ ಹೆಚ್ಚುವರಿ ಕ್ಯಾಲೋರಿಯನ್ನು ಬರ್ನ್ ಮಾಡುವುದು ಅತ್ಯಾವಶ್ಯಕ, ಇಲ್ಲವಾದಲ್ಲಿ ಅವುಗಳು ಕೆಟ್ಟ ಬೋಜ್ಜಿನ ರೂಪದಲ್ಲಿ ಬದಲಾಗಿ ನಮ್ಮ ತೂಕ ನಿಯಮಿತ ಪ್ರಮಾಣಗಿಂತಲೂ ಅಧಿಕ ಬರುವಂತೆ ಮಾಡುತ್ತದೆ. ನೆನಪಿರಲಿ ಸರ್ವ ರೋಗಕ್ಕೂ ನಮ್ಮ ಅತಿಯಾದ ದೇಹ ತೂಕವೇ ಬಹುತೇಕ ಕಾರಣವಾಗಿರುತ್ತೆ.

ದಿನನಿತ್ಯ ಪೋಷಕ ಆಹಾರಗಳ ಅಥವಾ ಪೂರಕ ಆಹಾರಗಳ ಸೇವನೆ ಮಾಡುವುದು – ಬಹಳಷ್ಟು ಜನರಿಗೆ ಪೋಷಕ ಆಹಾರಗಳು ಎಂದರೇನೇ ಏನು ಅಂತ ತಿಳಿದಿರುವುದಿಲ್ಲ, ಹಾಗಾಗಿ ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳುವ ಮಾತು ದೂರವೇ ಉಳಿಯುತ್ತದೆ. ಕನ್ನಡದ ಪ್ರಸಿದ್ಧ ಗಾದೆ ‘ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ’ ಎನ್ನುವುದು ಅಕ್ಷರಶಃ ನಿಜವಾದ ಮಾತು.
ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಆದಷ್ಟು ದೂರವಿಡಬೇಕು, ವಿಟಮಿನ್ ಮತ್ತು ಮಿನರಲ್ ಗಳು ಹೆಚ್ಚು ಇರುವ ಆಹಾರಗಳನ್ನು ಸೇವಿಸಬೇಕು, ಎನರ್ಜಿ, ಕಾರ್ಬೋ ಹೈಡ್ರೆಟ್, ಒಳ್ಳೆಯ ಕೊಬ್ಬಿನ ಅಂಶಗಳು ಇರುವ ಹಾಗೂ ನಾರಿನ ಪದಾರ್ಥಗಳನ್ನು ಸೇವಿಸಿ.
ಹೆಚ್ಚು ಹೆಚ್ಚು ನೀರನ್ನು ಕುಡಿಯಿರಿ (ಆದಷ್ಟು ಉಗುರು ಬೆಚ್ಚಗಿನ ನೀರು ಕುಡಿದರೆ ನಿಮ್ಮ ಆರೋಗ್ಯಕ್ಕೆ ಒಂದು ಉತ್ತಮ ಪ್ಲಸ್ ಪಾಯಿಂಟ್)
ಒಂದು ಬಾರಿ ಹೆಚ್ಚಾಗಿ ಆಹಾರ ಸೇವಿಸಿ ತುಂಬ ಹೊತ್ತು ಊಟ ಮಾಡದೇ ಇರುವ ಬದಲು, ಸ್ವಲ್ಪ ಸ್ವಲ್ಪ ಆಹಾರವನ್ನು ಸಮಯ ಸಮಯಕ್ಕೆ ಸೇವಿಸಬೇಕು. ಪ್ರತಿ ಬಾರಿಯೂ ನಿಮ್ಮ ಆಹಾರದಲ್ಲಿ ಬೇರೆ ಬೇರೆ ಹಣ್ಣುಗಳು, ತರಕಾರಿ ಮತ್ತು ಸೊಪ್ಪುಗಳಿರಲಿ. ಒಂದೊಂದು ಬಣ್ಣದ ಹಣ್ಣುಗಳಲ್ಲಿ ಒಂದೊಂದು ತರಹದ ಪೋಷಕಾಂಶಗಳಿರುತ್ತವೆ.

ಕೆಟ್ಟ ಚಟಗಳಾದ ಮಧ್ಯಪಾನ ಮತ್ತು ಧೂಮಪಾನಗಳಿಂದ ದೂರವಿದ್ದರೆ ನಮ್ಮ ಆರೋಗ್ಯವು ಉತ್ತಮದಿಂದ ಕೂಡಿರುತ್ತದೆ.

ಒಂದು ತಂಪಾದ ನಿದ್ದೆ – ಹೌದು ರೀ ಇತ್ತೀಚೆಗೆ ಕೆಲವರ ದೊಡ್ಡ ಸಮಸ್ಯೆ ಏನಪ್ಪಾ ಅಂದರೆ ಎಲ್ಲಿ ಸಿಕ್ಕರಲ್ಲಿ ನಿದ್ದೆಗೆ ಜಾರಿ ಬಿಡುತ್ತಾರೆ ಮತ್ತು ಇನ್ನು ಕೆಲವರು ರಾತ್ರಿಯೆಲ್ಲಾ ಹಾಸಿಗೆ ಮೇಲೆ ಹೊರಳಾಡಿದರು ನಿದ್ದೆ ಬರಲ್ಲ, ಈ ಎರಡು ಸಂಧರ್ಭಗಳಲ್ಲೂ ಸಹ ಮನುಷ್ಯನ ದೇಹ ತನಗೆ ಪ್ರಶಾಂತವಾದ ನಿದ್ದೆಯೊಂದಿಗೆ ವಿರಾಮ ಬೇಕು ಎಂದು ಹೇಳುತ್ತಿರುತ್ತದೆ. ನಮ್ಮ ನಾಳೆಯ ಮುಂಜಾನೆ ಮತ್ತು ಸಂಪೂರ್ಣ ದಿನ ಉತ್ಸಾಹದಿಂದ ಇರಬೇಕು ಅಂದರೆ ಈ ದಿನ ಕನಿಷ್ಠ 6-8 ತಾಸು ನಮಗೆ ಪ್ರಶಾಂತವಾದ ನಿದ್ದೆಯ ಅವಶ್ಯಕತೆ ಇದೆ. ನಾವು ಈ ವಿರಾಮವನ್ನು ನಮ್ಮ ದೇಹಕ್ಕೆ ಕೊಡದೆ ಹೋದರೆ ನಾಳೆಗೆ ಬೇಕಾದ ಎನರ್ಜಿ ಅಥವಾ ಉತ್ಸಾಹವನ್ನು ಕೊಡಲು ದೇಹಕ್ಕೆ ಆಗುವುದಿಲ್ಲ. ಕೆಲಸ ಎಲ್ಲವೂ ಮಾಡಿ ಆದರೆ ಸರಿಯಾದ ಕ್ರಮದಲ್ಲಿ ನಿದ್ದೆ ಮಾಡುವುದನ್ನು ಮರೆಯದಿರಿ.

ಮನಸ್ಸಿನಲ್ಲಿ ಯಾವಾಗಲು ಸಕಾರಾತ್ಮಕ ಭಾವನೆಗಳನ್ನು ತುಂಬಿಸಿಕೊಳ್ಳುವುದು – ಇವತ್ತಿನ ಈ ಪ್ರಪಂಚದಲ್ಲಿ ಮನುಷ್ಯನ ಮೆದುಳಲ್ಲಿ ಒಂದು ದಿನಕ್ಕೆ ಸರಿ ಸುಮಾರು 60 ಸಾವಿರದಿಂದ ಒಂದು ಲಕ್ಷದವರೆಗೆ ಯೋಚನೆಗಳು ಬಂದು ಹೋಗುತ್ತವೆ, ನೀವು ಹೇಗೆ ನಿಮ್ಮ ಯೋಚನೆಗಳನ್ನು ನಿಯಂತ್ರಣ ಮಾಡುತ್ತೀರಿ ಅನ್ನುವುದರ ಮೇಲೆ ಸಕಾರಾತ್ಮಕ ಆಗಲಿ ಅಥವಾ ನಕಾರಾತ್ಮಕ ಯೋಚನೆಗಳಲಿ ಕೆಲವೊಮ್ಮೆ ನಿಮ್ಮ ಮನಸಲ್ಲಿ ಶಾಶ್ವತವಾಗಿ ಉಳಿಯುತ್ತವೆ ಮತ್ತು ನಿಮ್ಮಲ್ಲಿ ಉಳಿದ ಆ ಯೋಚನೆಗಳ ನೆರಳಿನಲ್ಲಿಯೇ ಮುಂಬರುವ ಪ್ರತಿಯೊಂದು ಯೋಚನೆಗಳು ಪ್ರಭಾವ ಬಿರುತ್ತವೆ ಹಾಗಾಗಿ ಪ್ರತಿ ಕ್ಷಣವೂ ಯಾವುದನ್ನೂ ತೆಗೆದುಕೊಳ್ಳಬೇಕು ಮತ್ತು ಯಾವುದನ್ನು ಬಿಡಬೇಕು ಅನ್ನುವುದು ಬಹಳ ಮಹತ್ವವಾಗುತ್ತದೆ. ನಿರಂತರವಾಗಿ ಸಕಾರಾತ್ಮಕ ವಿಷಯಗಳು, ವ್ಯಕ್ತಿಗಳು ಅಥವಾ ಸ್ಥಳಗಳಿಗೆ ಹೋಗುತ್ತಿದ್ದರೆ ನಿಮ್ಮ ಮನಸ್ಸು ಸದಾ ಉಲ್ಲಾಸಬರಿತವಾಗಿ ಇರುತ್ತದೆ ಮತ್ತು ದೇಹದ ಆರೋಗ್ಯದ ಮೇಲೂ ಸಹ ಉತ್ತಮ ಪರಿಣಾಮ ಬಿರುತ್ತವೆ.

ಒಂದು ನೆನಪಿಟ್ಟುಕೊಳ್ಳಿ, ನಿಮ್ಮ ಮನಸ್ಸಲ್ಲಿ ಬರುತ್ತಿರುವ ಯಾವುದೇ ರೀತಿಯ ಯೋಚನೆಗಳನ್ನು ಅಷ್ಟು ಸಾಮಾನ್ಯವಾಗಿ ನಿಯಂತ್ರಣ ಮಾಡಲಾಗುವುದಿಲ್ಲ ಆದರೆ ನಕಾರಾತ್ಮಕ ಯೋಚನೆಗಳಿಗೆ ಮತ್ತು ನಕಾರಾತ್ಮಕ ಭಾವನೆಗಳಿಗೆ ಜಾಗವೇ ಇಲ್ಲದಷ್ಟು ಸಕಾರಾತ್ಮಕ ವಿಷಯಗಳು ಮತ್ತು ಭಾವನೆಗಳಿಗೆ ಅಸ್ಪದ ಕೊಡಬೇಕು.
ಸಕಾರಾತ್ಮಕ ಮನಸ್ಥಿತಿ ಪಡೆಯಲು ಕೆಲವೊಂದು ಒಳ್ಳೆಯ ಪುಸ್ತಕಗಳನ್ನು ಓದಿ, ಒಳ್ಳೆಯ ಸಕಾರಾತ್ಮಕ ವಿಡಿಯೋಗಳನ್ನು ನೋಡಿ, ಅಂತಹ ವ್ಯಕ್ತಿಗಳೊಂದಿಗೆ ಬೆರೆಯಿರಿ, ಪೂಜಾ ಪಾಠ ಮಾಡುವಂತಹ ಸ್ಥಳಗಳಿಗೆ ಭೇಟಿ ನೀಡಿ. ನಕಾರಾತ್ಮಕ ಭಾವನೆ ತರಿಸಿಕೊಳ್ಳಲು ಇಷ್ಟೊಂದು ಕಷ್ಟ ಪಡಬೇಕಾಗಿಲ್ಲ ಅವುಗಳು ತನ್ನಿತಾನೆ ಬರುತ್ತವೆ ಆದರೆ ಬಹಳ ದೊಡ್ಡ ಪ್ರಭಾವ ಬೀರಿ ಹೋಗುತ್ತವೆ.

ಸೊ ನೋಡಿದ್ರಲ್ಲಾ ಸ್ನೇಹಿತರೇ ರಾಷ್ಟೀಯ ನ್ಯೂಟ್ರಿಷನ ಸಪ್ತಾಹ ಇನ್ನೇನು ಪ್ರಾರಂಭವಾಗಲಿದೆ, ಇವತ್ತಿನಿಂದಲೇ ನಿಮ್ಮ ಬೈಕ್ ಮತ್ತು ಕಾರುಗಳ ಕೇರ್ ತೆಗೆದುಕೊಳ್ಳುವ ರೀತಿಯಲ್ಲಿಯೇ ನಿಮ್ಮ ದೇಹದ, ನಿಮ್ಮ ಆರೋಗ್ಯದ, ನಿಮ್ಮ ಯೋಚನೆಗಳ, ನಿಮ್ಮ ಆಹಾರ ಪದ್ಧತಿಗಳ ಹಾಗೂ ನಿಮ್ಮ ದೈನಂದಿನ ಜೀವನ ಶೈಲಿಯ ಕೇರ್ ಅನ್ನು ತೆಗೆದುಕೊಳ್ಳಲು ಇಂದಿನಿಂದಲೇ ಮುಂದಾಗಿ.
ಉತ್ತಮವಾದ ಆಹಾರ ಸೇವಿಸಿ, ಉತ್ತಮವಾದ ವಿಚಾರ ಧಾರೆಗಳನ್ನು ಯೋಚಿಸಿ, ಉತ್ತಮವಾದ ನಿದ್ರೆ ಮಾಡಿ ಮತ್ತು ಉತ್ತಮವಾದ ಜೀವನ ಜೀವಿಸಿ.
Seculartv #National #Nutrition #Week #2021 #Goodhealth #Optimalhealth #Nutrition #Exercise #PositiveMentalAttitude #AdequateRest #KannadaNews #HealthTips #Lifestyle