ಮಂಡ್ಯ: ಮಂಡ್ಯ ನಗರದಲ್ಲಿ ಈಗಾಗಲೇ ಬಾಡಿಗೆ ಮನೆ ಮಾಡಿರೊ ಸಂಸದೆ ಸುಮಲತಾ ಅಂಬರೀಷ್ (Sumalatha Ambarish) ಈಗ ಸ್ವಂತ ಮನೆಯನ್ನ ಹನಕೆರೆಯಲ್ಲಿ ನಿರ್ಮಿಸಲು ಹೊರಟಿದ್ದಾರೆ. ಸಂಸದೆ ಸುಮಲತಾ ಇಂದು ಮಂಡ್ಯ ಪ್ರವಾಸ ಕೈಗೊಂಡಿದ್ದು, ಮಂಡ್ಯ ತಾಲೂಕಿನ ಹನಕೆರೆ ಗ್ರಾಮದ ಬಳಿ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ, ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಮಂಡ್ಯದಲ್ಲೇ ಮನೆ ನಿರ್ಮಾಣಕ್ಕೆ ಸಂಸದೆ ಮುಂದಾಗಿದ್ದಾರೆ. ತನ್ನ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹನಕೆರೆ ಶಶಿ ಎಂಬುವರಿಂದ ಈ ಜಾಗವನ್ನು ಖರೀದಿ ಮಾಡಿ ಮುಕ್ಕಾಲು ಎಕರೆ ಜಾಗದಲ್ಲಿ ಮನೆ ನಿರ್ಮಿಸಲು ಸಜ್ಜಾಗಿದ್ದಾರೆ. ಅಲ್ಲಿಂದಲೇ ಮುಂದಿನ ಚುನಾವಣೆ ತಯಾರಿ ಆರಂಭಿಸುವ ಚಿಂತನೆ ಇದೆ ಎಂಬ ಮಾತುಗಳು ಕೇಳಿಬಂದಿದೆ.

ಜೊತೆಗೆ ಮುಂದಿನ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಅಭಿಷೇಕ್ ಅಂಬರೀಷ್ ಕಣಕ್ಕಿಳಿಸಲು ಸುಮಲತಾ ಯೋಜನೆ ರೂಪಿಸುತ್ತಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಷ್ ಹುಟ್ಟೂರು ಕೂಡ ಮದ್ದೂರಿನ ದೊಡ್ಡರಸಿನಕೆರೆ ಗ್ರಾಮವಾಗಿದ್ದು, ತಂದೆಯ ಹುಟ್ಟೂರು ಕ್ಷೇತ್ರದಿಂದಲೇ ಮಗನ ಸ್ಪರ್ಧೆಗೆ ಸಿದ್ಧತೆ ಶುರುವಾಗಿದೆ… ಹಾಗಾಗಿ ಮಗನ ರಾಜಕೀಯ ಭವಿಷ್ಯಕ್ಕೆ ಸಹಾಯವಾಗಲೆಂದು ಹನಕೆರೆ ಬಳಿ ಸ್ವಂತ ಮನೆ ನಿರ್ಮಾಣ ಮಾಡಲಾಗುತ್ತಿದೆ ಎಂಬ ಅಭಪ್ರಾಯಗಳಿವೆ.

ಜಿಲ್ಲಾ ಕೇಂದ್ರ ಮಂಡ್ಯದಲ್ಲಿ ಮನೆ ನಿರ್ಮಾಣ ಮಾಡದೆ ಮಂಡ್ಯ ಹಾಗೂ ಮದ್ದೂರು ತಾಲೂಕುಗಳ ಮಧ್ಯೆ ಇರುವ ಹನಕೆರೆ ಗ್ರಾಮವನ್ನು ಆರಿಸಿಕೊಂಡಿರುವುದು ಸದ್ಯ ಮಂಡ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ನಿವಾಸದ ಗುದ್ದಲಿ ಪೂಜೆ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟು ಹಾಕಿದ್ದು, ಸ್ವಂತ ಮನೆ ನಿರ್ಮಾಣದ ಮೂಲಕ ಪುತ್ರ ಅಭಿಷೇಕ್ ಅಂಬರೀಷ್ ರಾಜಕೀಯ ಪ್ರವೇಶಕ್ಕೆ ಸಿದ್ಧತೆ ನಡಿತಿದ್ಯಾ ಎಂಬ ಪ್ರಶ್ನೆ ಹುಟ್ಟು ಹಾಕಿದೆ.
Mandya MP Sumalatha ambarish new hone Monday hanakere