ಬೆಂಗಳೂರು: ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ತಡರಾತ್ರಿ ಭೀಕರ ಅಪಘಾತವೊಂದು ಸಂಭವಿಸಿದೆ. ತಡರಾತ್ರಿ 1.45ರಿಂದ 2 ಗಂಟೆ ಸುಮಾರಿಗೆ ಐಷಾರಾಮಿ ಕಾರು ಅಪಘಾತವಾಗಿ ಮೂವರು ಮಹಿಳೆಯರು ನಾಲ್ಕು ಪುರುಷರು ಸೇರಿ 7 ಜನರ ಮೃತಪಟ್ಟಿದ್ದಾರೆ.
ಇನ್ನೂ ಅಪಘಾತದಲ್ಲಿ ಮೃತಪಟ್ಟವರಲ್ಲಿ ತಮಿಳುನಾಡಿನ ಹೊಸೂರು ಕ್ಷೇತ್ರದ ಶಾಸಕ ವೈ.ಪ್ರಕಾಶ್ ಪುತ್ರ ಕರುಣಾ ಸಾಗರ್ ಕೂಡ ಒಬ್ಬ. ಮೃತ ಕರುಣಾ ಸಾಗರ್ ಬೆಂಗಳೂರಿನಲ್ಲೇ ಬಹುತೇಕ ವ್ಯವಹಾರ ನಡೆಸ್ತಾ ಇದ್ದು,
ಕಟ್ಟಡ ನಿರ್ಮಾಣ ಸಾಮಗ್ರಿ ಖರೀದಿ ಮಾಡಲು ನಿನ್ನೆ ಸಂಜೆ 5.30ಕ್ಕೆ ಬೆಂಗಳೂರಿಗೆ ಬಂದಿದ್ದ ಕರುಣಾಸಾಗರ್ ಬಂದಿದ್ದ. ನಿನ್ನೆ ರಾತ್ರಿ ಕುಟುಂಬಸ್ಥರಿಂದ ಕರೆ ಬಂದಾಗ ಊಟಕ್ಕೆ ಮನೆಗೆ ಬರುತ್ತೀಯಾ ಎಂದು ಕೇಳಿದಾಗ ಮನೆಯವರ ಬಳಿ ಊಟಕ್ಕೆ ಬರಲ್ಲವೆಂದಿದ್ದ. ಆದ್ರೆ ತಡ ರಾತ್ರಿ 1-2ಗಂಟೆ ಆಸುಪಾಸಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಇನ್ನೂ ತಡರಾತ್ರಿ ಅಂದರೆ 1.45 ರಿಂದ 2 ಗಂಟೆ ನಡೆದ ಈ ಐಷಾರಾಮಿ ಕಾರು ಅಪಘಾತವಾಗಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಪುರುಷರು ಸೇರಿ 7 ಜನರ ಮೃತಪಟ್ಟಿದ್ದಾರೆ. ಫುಟ್‌ಪಾತ್ ಹತ್ತಿ ಡಿವೈಡರ್‌ಗೆ ಗುದ್ದಿರುವ ಐಷಾರಾಮಿ ಕಾರು ಬಳಿಕ ಪಕ್ಕದ ಕಟ್ಟಡದ ಗೋಡೆಗೆ ಡಿಕ್ಕಿಯಾಗಿದೆ. ಕಾರಿನ ಮುಂದಿನ ಸೀಟ್ ತುಂಬಾ ರಕ್ತದ ಕಲೆಗಳಿದ್ದು ಕಾರಿನ ಎಡಭಾಗದ 2 ಟೈರ್ ಸಂಪೂರ್ಣ ಪೀಸ್‌ಪೀಸ್ ಆಗಿದೆ. ಐಷಾರಾಮಿ ಕಾರಿನಲ್ಲಿದ್ದ 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬರು ಆಸ್ಪತ್ರೆಗೆ ದಾಖಲಿಸಿದ ವೇಳೆ ಮೃತಪಟ್ಟಿದ್ದಾರೆ. ಕಾರಿನ ಮುಂದಿನ ಸೀಟ್‌ನಲ್ಲಿ ಮೂವರು ಕುಳಿತಿದ್ದು ಹಿಂಬದಿ ಸೀಟ್‌ನಲ್ಲಿ ನಾಲ್ವರು ಕುಳಿತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಮೃತರೆಲ್ಲರೂ ಸ್ನೇಹಿತರಾಗಿದ್ದು, 20 ರಿಂದ 30 ವರ್ಷದವರಾಗಿದ್ದಾರೆ. ಹೊಸೂರು ಮೂಲದ ಕರುಣಾಸಾಗರ್, ಬಿಂದು(28), ಕೇರಳ ಮೂಲದ ಅಕ್ಷಯ್ ಗೋಯಲ್, ಇಶಿತಾ(21), ಧನುಷಾ(21), ಹುಬ್ಬಳ್ಳಿಯ ರೋಹಿತ್, ಹರಿಯಾಣ ಮೂಲದ ಉತ್ಸವ್ ಮೃತ ದುರ್ದೈವಿಗಳಾಗಿದ್ದಾರೆ.

ಕಾರಿನಲ್ಲಿದ್ದ ಏರ್‌ಬ್ಯಾಗ್ ಸಹ ಓಪನ್ ಆಗಿರಲಿಲ್ಲಾ ಎಂದು ಕೋರಮಂಗಲದ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿ ನೀಡಿದ ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ. ಕಾರಿನಲ್ಲಿದ್ದ 7 ಜನರಲ್ಲಿ ಯಾರೂ ಸೀಟ್ ಬೆಲ್ಟ್ ಹಾಕಿರಲಿಲ್ಲ. ಇದರಿಂದ ಕಾರಿನಲ್ಲಿದ್ದ ಏರ್‌ಬ್ಯಾಗ್ ಸಹ ಓಪನ್ ಆಗಿಲ್ಲ. ಮೃತರೆಲ್ಲರೂ 25ರಿಂದ 30 ವರ್ಷ ವಯಸ್ಸಿನವರು. ಓರ್ವ ದಂಪತಿ ಸಹ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ. ಬೆಂಗಳೂರಲ್ಲಿ ಕೆಲಸ ಮಾಡಿಕೊಂಡು ಕೆಲವರು ಪಿಜಿಯಲ್ಲಿದ್ದರು ಎಂದು ತಿಳಿಸಿದ್ದಾರೆ.
ಸದ್ಯ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿರುವ 7 ಜನರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು ಮರಣೋತ್ತರ ಪರೀಕ್ಷೆ ಬಳಿಕ ಮದ್ಯ ಸೇವನೆ ಮಾಹಿತಿ ಲಭ್ಯವಾಗಲಿದೆ. ಮೃತರಲ್ಲಿ ಕೆಲವರು ಕೋರಮಂಗಲದ ಜೋಲೋ ಸ್ಟೇ ಪಿಜಿಯಲ್ಲಿ ವಾಸವಿದ್ರು. ಈ ಸಂಬಂಧ ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಅಪಘಾತಕ್ಕೆ ತುತ್ತಾದ ಕಾರಿಗೆ ಫ್ಯಾನ್ಸಿ ನಂಬರ್ ಇದ್ದು. ಅದು KA 03 MY 6666. ಈ ನಂಬರಿನ ಕಾರು ಅಪಘಾತದ ರಭಸಕ್ಕೆ ಸಂಪೂರ್ಣ ನಜ್ಜುಗುಜ್ಜಾಗಿದೆ.