ಬೆಂಗಳೂರು : ಅವರು ಕಾರು ಅಪಘಾತದಲ್ಲಿ ತಮ್ಮ ಎರಡು ಕಾಲುಗಳನ್ನು ಕಳೆದುಕೊಂಡಿದ್ದರು, ಜೀವನದಲ್ಲಿ ಮಾನಸಿಕವಾಗಿ ಬಹಳಷ್ಟು ಕುಗ್ಗಿ ಹೋಗಿದ್ದರು. ಮೊಟ್ಟ ಮೊದಲ ಬಾರಿ ಗನ್ ಹಿಡಿಯಲು ಪ್ರಯತ್ನ ಪಟ್ಟಾಗ ಗನ್ ಹಿಡಿದ ಕೈ ಮೇಲೇತ್ತಲು ಸಹ ಇವರಿಂದ ಆಗಿರಲಿಲ್ಲ. ಆದರೂ ಇಚ್ಛಾ ಶಕ್ತಿ ಮತ್ತು ಸಾಧಿಸುವ ಛಲ ಇದ್ದರೆ ಏನು ಬೇಕಾದರೂ ಮಾಡಬಹುದು ಎಂದು ಅವನಿ ಲೇಖರಾರವರು ಸಾಬೀತುಪಡಿಸಿದ್ದಾರೆ.
ಬನ್ನಿ ಅವನಿ ಲೇಖರಾ ಅವರ ಈ ರೋಚಕ ಪಯಣವನ್ನು ತಿಳಿಯೋಣ.
ಅವನಿ ಲೇಖರಾ (Avani Lekhara) ಅವರು 8 ನವೆಂಬರ್ 2001ರಲ್ಲಿ ರಾಜಸ್ತಾನದ ಜೈಪುರಲ್ಲಿ ಜನಿಸಿದರು. ಪ್ರಸ್ತುತ ಅವನಿ ಲೇಖರಾ ಅವರು ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸನಲ್ಲಿ 10 ಮೀ ಏರ್ ರೈಫಲ್ ನಲ್ಲಿ ಬಂಗಾರದ ಪದಕ ಗೆದ್ದು ಇತಿಹಾಸ ರಚಿಸಿದ್ದಾರೆ. ಫೈನಲ್‌ನಲ್ಲಿ ಅವನಿ ಯವರು 249.6 ಅಂಕಗಳನ್ನು ಗಳಿಸಿ ಈ ಬಂಗಾರದ ಪದಕವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಸಫಲರಾದರು. ಈ ಕುರಿತು ಅವರ ತಂದೆ ಪ್ರವೀಣ ಲೇಖರಾರವರು ತಮ್ಮ ಹರ್ಷವನ್ನು ವ್ಯಕ್ತಪಡಿಸಿದ್ದು ಜೊತೆಗೆ ಅವನಿ ಲೇಖರಾರವರ ಜೀವನ ಹಾಗೂ ಸಾಧನೆ ಕುರಿತು ತಿಳಿಸಿದ್ದಾರೆ.

ಕಾರು ಅಪಘಾತದಲ್ಲಿ ಎರಡು ಕಾಲು ಕಳೆದುಕೊಂಡು ಕಮರಿ ಹೋಗಿತ್ತು ಆಕೆಯ ಜೀವನದ ಕನಸುಗಳು. 9 ವರ್ಷಗಳ ಹಿಂದೆ ನಡೆದ ಕಾರು ಅಪಘಾತದಲ್ಲಿ ದುರದೃಷ್ಟವಶಾತ್ ಅವನಿ ಲೇಖರಾ ತಮ್ಮ ಎರಡು ಕಾಲುಗಳನ್ನು ಕಳೆದುಕೊಳ್ಳುತ್ತಾರೆ, ಆ ಕ್ಷಣದಿಂದ ಜೀವನದಲ್ಲಿನ ತಮ್ಮ ಎಲ್ಲ ಉತ್ಸಾಹವನ್ನು ಕಳೆದುಕೊಂಡು, ಮಾನಸಿಕವಾಗಿ ಬಹಳ ಕುಗ್ಗಿ ಹೋದ ಅವನಿ ಹೆಚ್ಚಿನ ಸಮಯ ಒಂಟಿಯಾಗಿಯೇ ಕಳೆಯುತ್ತಿದ್ದರು.
ಏನಾದರೂ ಮಾಡಿ ಇವರ ಜೀವನದಲ್ಲಿ ಮತ್ತೆ ಉತ್ಸಾಹ ತರಬೇಕು, ಮೊದಲಿನಂತೆ ಜೀವಿಸುವ ರೀತಿ ಮಾಡಬೇಕು ಎಂದು ಅವರ ತಂದೆ ಅವರನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಾರೆ, ಅತ್ಲೇಟಿಕ್ಸ್ ನಲ್ಲಿ ಇವರಿಗೆ ಭಾಗವಹಿಸಲು ಆಗುವುದಿಲ್ಲ, ಆರ್ಚರಿಯಲ್ಲಿ ಪ್ರಯತ್ನ ಪಟ್ಟಾಗ, ಬಿಲ್ಲಿನ ಪ್ರತ್ಯಂಚಿಕೆ ಎಳೆಯಲು ಇವರಿಂದ ಸಾಧ್ಯವಾಗಲಿಲ್ಲ. ಕೊನೆಗೆ ಏರ್ ರೈಫಲ್ ಶೂಟಿಂಗ್ ನಲ್ಲಿ ಭಾಗವಹಿಸಲು ನಿರ್ಧಾರ ಮಾಡಿದಾಗ ಗನ್ ಎತ್ತಿಕೊಳ್ಳಲು ಸಹ ಅವಳಿಗೆ ಆಗಿರಲಿಲ್ಲ ಆದರೆ ಇವತ್ತು ಏರ್ ರೈಫಲ್ ನಲ್ಲಿ ಬಂಗಾರದ ಪದಕ ಗೆದ್ದಿದ್ದಾಳೆ ಎಂದರು.

ಅಪಘಾತವಾದ ಬಳಿಕ ಕೆಲವೊಮ್ಮೆ ಅವಳ ಮನಸ್ಸಿಗೆ ಹಿತ ಸಿಗಲೆಂದು ಶೂಟಿಂಗ್ ರೇಂಜ್ ಗೆ ಕರೆದೋಯುತ್ತಿದ್ದೆ ಬಹುಷಃ ಆವಾಗಲೇ ಶೂಟಿಂಗ್ ಬಗ್ಗೆ ಅವಳಿಗೆ ಆಸಕ್ತಿ ಮೂಡಲು ಪ್ರಾರಂಭವಾಯಿತು. ಅವಳ ಕಠಿಣ ಪರಿಶ್ರಮ ನಿರಂತರ ಅಭ್ಯಾಸದಿಂದ ಇವತ್ತು ಈ ಮಟ್ಟಿಗೆ ಅವಳನ್ನು ತಂದು ನಿಲ್ಲಿಸಿದೆ ಎಂದರು.
ಕೋವಿಡ್ ಸಂಧರ್ಭದಲ್ಲಿ, ಲಾಕ್ ಡೌನ್ ಆದಾಗ, ಶೂಟಿಂಗ್ ರೇಂಜ್ ಸಹ ಮುಚ್ಚಿದ್ದರಿಂದ ಅವಳು ತನ್ನ ಅಭ್ಯಾಸ ತಪ್ಪುತ್ತದೆ ಎಂದು ಹಠ ಮಾಡಿ ಡಿಜಿಟಲ್ ಟಾರ್ಗೆಟ್ ಅನ್ನು ಮನೆಗೆ ತರಿಸಿಕೊಂಡಿದ್ದಳು. ಈ ಡಿಜಿಟಲ್ ಟಾರ್ಗೆಟನ್ನು ಹುಡುಕಿ ತರಲು ನಾವು ಸಹ ಸಾಕಷ್ಟು ಕಷ್ಟ ಪಟ್ಟೆವು ಎಂದು ಈ ಸಮಯದಲ್ಲಿ ಹೇಳಿದರು. ಪ್ಯಾರಾಲಿಂಪಿಕ್ಸನ ಬಗ್ಗೆ ಜನರ ಅಭಿಪ್ರಾಯ ಮತ್ತು ದೃಷ್ಟಿಕೋನಗಳ ಕುರಿತು ತಮ್ಮ ಅಸಮಾಧಾನ ಪ್ರವೀಣ್ ಲೇಖರಾ ಹೊರ ಹಾಕಿದ್ದಾರೆ.
ಈ ಕುರಿತು ಸಹ ಮಾತನಾಡಿದ ಅವನಿ ಯವರ ತಂದೆ, ಪ್ಯಾರಾಲಿಂಪಿಕ್ಸನಲ್ಲಿ ಸ್ಪರ್ಧೆಯೇ ಇರಲ್ಲ, ಅಲ್ಲಿ ಗೆಲ್ಲುವುದು ಬಹಳ ಸುಲಭ, ಕುರ್ಚಿಯಲ್ಲಿ ಕುಳಿತ ಕಡೆಯೇ ಕುಳಿತು ಗುರಿ ಇಡುವುದು ಅಲ್ಲವೇ ಅದು ಬಹಳ ಸುಲಭ ಯಾರು ಬೇಕಾದರೂ ಅದನ್ನು ಮಾಡಬಹುದು ಎಂಬ ಇತ್ಯಾದಿ ಜನಾಭೀಪ್ರಾಯ ಕುರಿತು ತಮ್ಮ ಅಸಮಾಧಾನ ಹೊರ ಹಾಕಿದ್ದು, ಯಾವುದು ಸಹ ಸುಲಭವಲ್ಲ ನಿರಂತರ ಪರಿಶ್ರಮ ಮತ್ತು ಕಠಿಣ ಅಭ್ಯಾಸ ಎಲ್ಲದಕ್ಕೂ ಬೇಕು ಅಂತ ತಿಳಿಸಿದರು.

ಪ್ಯಾರಾಲಿಂಪಿಕ್ಸನಲ್ಲಿ ಇವರೆಗೆ ಭಾರತದ ಮಹಿಳೆಯರಿಗೆ ಮೂರು ಪದಕಗಳು ಮತ್ತು ಒಲಂಪಿಕ್ಸ್ ನಲ್ಲಿ ಭಾರತದ ಮಹಿಳೆಯರಿಗೆ ಒಟ್ಟಾರೆಯಾಗಿ ಎಂಟು ಪದಕಗಳು ಲಭಿಸಿವೆ. ಪ್ಯಾರಾಲಿಂಪಿಕ್ಸನ ಇತಿಹಾಸದಲ್ಲಿ ಇವರೆಗೆ ಭಾರತೀಯ ಮಹಿಳೆಯರು ಮೂರು ಪದಕಗಳನ್ನು ಗೆದ್ದಿದ್ದಾರೆ, ಮೊದಲನೆಯದಾಗಿ ದೀಪಾ ಮಲಿಕ್ ಅವರು ಶಾಟ್ ಪುಟ್‌ನಲ್ಲಿ ಪದಕ ಗೆದ್ದಿದ್ದರೆ, ಭವಿನ ಬೆಗ್ ಪಟೇಲ್ ರವರು ಇದೇ ಪ್ಯಾರಾಲಿಂಪಿಕ್ಸನ ಟೇಬಲ್ ಟೆನಿಸ್ ನಲ್ಲಿ ಪದಕ ಗೆದ್ದಿದ್ದಾರೆ.
ಇನ್ನು ಒಲಿಂಪಿಕ್ಸ್‌ನಲ್ಲಿ, ಭಾರತೀಯ ಮಹಿಳೆಯರಾದ ಕರ್ಣಮ್ ಮಲ್ಲೇಶ್ವರಿ, ಸೈನ ನೆಹವಲ್, ಮೇರಿ ಕೋಂ, ಸಾಕ್ಷಿ ಮಲಿಕ್, ಮೀರಾ ಬಾಯ್ ಚಾನು ಮತ್ತು ಲವಲಿನ ಬೋರ್ಗೋಹೆನ್ ತಲಾ ಒಂದೊಂದು ಪದಕಗಳನ್ನು ಹಾಗೂ ಪಿವಿ ಸಿಂಧು ಅವರು ಎರಡು ಪದಕ ಸೇರಿ ಒಟ್ಟಾರೆ ಎಂಟು ಪದಕಗಳನ್ನು ಗೆದ್ದಿದ್ದಾರೆ.