ಕಾಬೂಲ್ : ಉಗ್ರರ ಸ್ವರ್ಗದಂತಾಗಿರುವ ಅಫ್ಘಾನಿಸ್ತಾನದಲ್ಲಿ ಒಂದೇ ವಾರದಲ್ಲಿ ಮೂರನೇ ಬಾಂಬ್ ದಾಳಿಯಾಗಿದ್ದು ಇಂದು ಕಾಬೂಲ್ ವಿಮಾನ ನಿಲ್ದಾಣದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಕ್ವಾಜಾಬುಘ್ರಾ ಜನ ವಸತಿ ಪ್ರದೇಶದ ಮೇಲೆ ರಾಕೇಟ್ ದಾಳಿಯಾಗಿದೆ.
ಘಟನೆಯಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು ಮೂರು ಮಂದಿಗೆ ಗಂಭೀರ ಗಾಯಗಳಾಗಿರುವ ಬಗ್ಗೆ ವರದಿಯಾಗಿದೆ. ಇಂದು ಬೆಳಗ್ಗೆಯಷ್ಟೇ ಅಮೇರಿಕಾ ಕಾಬೂಲ್ ನಲ್ಲಿ ಮತ್ತೊಂದು ದಾಳಿಯಾಗುವ ಮುನ್ಸೂಚನೆ ನೀಡಿತ್ತು. ಈ ಎಚ್ಚರಿಕೆಯ ಬೆನ್ನಲೆ ರಾಕೇಟ್ ದಾಳಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ರಾಕೇಟ್ ದಾಳಿಯನ್ನು ಐಸಿಸ್ – ಕೆ ನಡೆಸಿರುವ ಶಂಕೆ ಇದ್ದು ಈವರೆಗೂ ಐಸಿಸ್ – ಕೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಕಾಬೂಲ್‌ನ ಅಂತರಾಷ್ಟ್ರೀಯ ವಿಮಾನದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಅಲ್ ಶಹೀದ್ ರಸ್ತೆಯ ಕ್ವಾಜಾಬುಘ್ರಾ ಪ್ರದೇಶದಲ್ಲಿ ದಾಳಿಯಾಗಿದ್ದು ವಿಮಾನ ನಿಲ್ದಾಣದ ಮೇಲಿನ ಗುರಿ ತಪ್ಪಿ ಜನವಸತಿ ಪ್ರದೇಶದ ಮೇಲೆ ಬಿದ್ದಿರುವ ಶಂಕೆ ಇದೆ.
ಕಳೆದ ಗುರುವಾರ ಕಾಬೂಲ್ ವಿಮಾನದ ನಿಲ್ದಾಣ ಸುತ್ತ ಐದು ಕಡೆ ಐಸಿಸ್ – ಕೆ ಸರಣಿ ಬಾಂಬ್ ಸ್ಫೋಟ ನಡೆಸಿತ್ತು. ಈ ದಾಳಿಯ ಬೆನ್ನಲೆ ಅಮೇರಿಕಾ ಪ್ರತಿಕಾರದ ದಾಳಿ ಮಾಡಿತ್ತು. ಈಗ ಮೂರನೇ ದಾಳಿಯಾಗಿದ್ದು ಬಾಂಬ್ ದಾಳಿಗೆ ಕಾಬೂಲ್ ಜನರು ಬೆಸ್ತು ಬಿದ್ದಿದ್ದಾರೆ.