ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸೆಗಿದ ಪ್ರಕರಣದಲ್ಲಿ ಪೊಲೀಸರ ವಶದಲ್ಲಿದ್ದ ಆರೋಪಿ ಪೊಲೀಸ್ ಠಾಣೆಯ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟ ಘಟನೆ ಇಂದು ನಡೆದಿದೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ ದೂರು ಸ್ವೀಕರಿದ್ದ ಪೊಲೀಸರು ಪ್ರಕರಣದಲ್ಲಿ ಆರೋಪಿಯನ್ನು ವಿಚಾರಣೆಗಾಗಿ ಠಾಣೆಗೆ ಕರೆ ತಂದಿದ್ದರು. ಪೊಲೀಸರ ವಶದಲ್ಲಿದ್ದ ಆರೋಪಿ ಇಂದು ಪೊಲೀಸ್ ಠಾಣೆಯ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಆರೋಪಿಯನ್ನು ಯಂಕಂಚಿ ಗ್ರಾಮದ ದೇವೇಂದ್ರ ಭೀಮರಾಯ ಸಂಗೋಗಿ ಎಂದು ಗುರುತಿಸಲಾಗಿದೆ. ಆರೋಪಿ ಡಾಬಾ ಮಾಲೀಕನಾಗಿದ್ದು, ತನ್ನ ಡಾಬಾದಲ್ಲಿ ಕಾರ್ಮಿಕನ 13 ವರ್ಷದ ಅಪ್ರಾಪ್ತ ಮಗಳ ಮೇಲೆ ಅ 23 ಹಾಗೂ 24 ರಂದು ಬಲವಂತವಾಗಿ ಅತ್ಯಾಚಾರ ನಡೆಸಿದ್ದಾನೆ. ಅಲ್ಲದೇ ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾಗಿ ಸಂತ್ರಸ್ತ ಬಾಲೆಯ ತಂದೆ ನಿನ್ನೆ (ಶನಿವಾರ) ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಶವವನ್ನು ವಿಜಯಪುರ ಸರ್ಕಾರಿ ಜಿಲ್ಲಾ ಅಸ್ಪತ್ರೆಗೆ ಸಾಗಿಸಲಾಗಿದೆ. ಅನುಮಾನಾಸ್ಪದ ಸಾವಿನ ಕುರಿತು ಆಕ್ರೋಶಗೊಂಡ ಆರೋಪಿಯ ಸಂಬಂಧಿಕರು ಸಿಂದಗಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪೊಲೀಸರೊಂದಿಗೆ ಮಾತಿನ ಚಕಮಕಿ ಉಂಟಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟ ಕಾರಣ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಎಸ್ಪಿ ಆನಂದಕುಮಾರ ತಿಳಿಸಿದ್ದಾರೆ.