ಬೆಳಗಾವಿ : ಗೋಕಾಕ್ ತಾಲೂಕಿನ ಘಟಪ್ರಭಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಘಟಪ್ರಭಾ ಪೊಲೀಸರು ಇಂದು ಬಂಧಿಸಿದ್ದಾರೆ. ದೂರು ದಾಖಲಾದ ಕೇವಲ 10 ಗಂಟೆಗಳಲ್ಲೇ ಘಟಪ್ರಭಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
20 ದಿನಗಳ ಹಿಂದೆಯೇ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿತ್ತು. 16 ವರ್ಷದ ಬಾಲಕಿ ಮೇಲೆ ನಾಲ್ಕು ಜನರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಗೋಕಾಕ್ ತಾಲೂಕಿನ ಘಟಪ್ರಭಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಮರ್ಯಾದೆ ಹಾಗೂ ಭಯದಿಂದ ಪೋಷಕರು ದೂರು ಸಲ್ಲಿಸಿರಲಿಲ್ಲ. ಆದರೆ, ಮತ್ತೆ ಆ ಕಾಮುಕರಿಂದ ತಮ್ಮ ಮಗಳಿಗೆ ತೊಂದರೆ ಆಗಬಹುದು ಎಂದು ಆತಂಕಗೊಂಡು ಬಾಲಕಿಯೊಂದಿಗೆ ಪೋಷಕರು 20 ದಿನಗಳ ಬಳಿಕ ಇಂದು ದೂರು ಸಲ್ಲಿಸಿದ್ದರು. ಬಂಧಿತ ಆರೋಪಿಗಳನ್ನು ವಿಚಾರಣೆ ಮಾಡಲಾಗುತ್ತಿದ್ದು, ತನಿಖೆ ಮುಂದುವರೆದಿದೆ.