ಬೆಂಗಳೂರು: ಬರೋಬ್ಬರಿ 18 ತಿಂಗಳ ಬಳಿಕ ರಾಜ್ಯದಲ್ಲಿ ಶಾಲಾ ಕಾಲೇಜು ಪುನಾರಂಭಗೊಂಡಿವೆ. ಕೋವಿಡ್ ಮೂರನೇ ಅಲೆಯ ಭೀತಿಯ ಮಧ್ಯೆಯು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ಶಾಲಾ ಕಾಲೇಜು ಆರಂಭ ಮಾಡಿದೆ. ಇಂದಿನಿಂದ 9 ರಿಂದ 12 ನೇ ತರಗತಿ ಆರಂಭವಾಗಿದ್ದು ಕೋವಿಡ್ ಪಾಸಿಟಿವ್ ದರ ಹೆಚ್ಚಿರುವ 5 ಜಿಲ್ಲೆ ( ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ, ಹಾಸನ, ಕೊಡಗು) ಹೊರತು ಪಡಿಸಿ ಉಳಿದೆಡೆ ಶಾಲೆ ಪ್ರಾರಂಭವಾಗಿವೆ
ಶಾಲಾ ಆವರಣದಲ್ಲಿ ಕಳೆಗಟ್ಟಿದ ಸಡಗರ ಸಂಭ್ರಮ – ರಂಗೋಲಿ ತಳಿರು ತೋರಣಗಳ ಮೂಲಕ ವಿದ್ಯಾರ್ಥಿಗಳಿಗೆ ಸ್ವಾಗತ
ಒಂದೂವರೆ ವರ್ಷಗಳ ಬಳಿಕ ಶಾಲಾ ಆವರಣಕ್ಕೆ ವಿದ್ಯಾರ್ಥಿಗಳು ಶಾಲೆಗೆ ಆಗಮಿಸ್ತಿರೋ ಹಿನ್ನಲೆ ಶಾಲಾ ಕಾಲೇಜುಗಳಲ್ಲಿ ಸಂಭ್ರಮ ಸಡಗರ ಮನೆ ಮಾಡಿತ್ತು.. ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಾಲಾ ಶಿಕ್ಷಕರು ಸಜ್ಜಾಗಿದ್ದು ಈಡೀ ಶಾಲಾ ಕಾಲೇಜು ಆವರಣದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಬೆಂಗಳೂರಿನ ಹಲವು ಶಾಲಾ ಕಾಲೇಜುಗಳಲ್ಲಿ ಬಾಳೆಕಂಬ ಕಟ್ಟಿ ಮಾವಿನ ತಳಿರು ತೋರಣಗಳಿಂದ ಶೃಂಗಾರ ಮಾಡಲಾಗಿತ್ತು.. ರಂಗೋಲಿ ಹಾಕಿ ವಿದ್ಯಾರ್ಥಿಗಳಿಗೆ ಚಾಕ್ಲೇಟ್ ನೀಡಿ ಸ್ವಾಗತಿಸಲಾಯ್ತು.. ಮಲ್ಲೇಶ್ವರಂ ಪದವಿ ಪೂರ್ವ ಕಾಲೇಜು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದು ಕಂಡು ಬಂತು.
ಕೋವಿಡ್ ಹಿನ್ನಲೆ ಮನೆಯಲ್ಲಿಯೇ ಇದ್ದ ವಿದ್ಯಾರ್ಥಿಗಳು ಖುಷಿ ಖುಷಿಯಾಗಿ ಶಾಲಾ ಆವರಣಕ್ಕೆ ಆಗಮಿಸಿದ್ರು.. ಶಾಲೆ ಆರಂಭವಾದ ಹಿನ್ನಲೆ ಶಿಕ್ಷಕರಲ್ಲೂ ಸಂತೋಷ ಮನೆ ಮಾಡಿ, ಹಬ್ಬದ ವಾತಾವರಣ ನಿರ್ಮಾಣವಾಗಿತ್ತು
ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ
ಶಾಲಾ ಕಾಲೇಜು ಆರಂಭದ ಮೊದಲ ದಿನ ಕಟ್ಟುನಿಟ್ಟಾಗಿ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಲಾಯಿತು. ಕಾಲೇಜು ಆವರಣದಲ್ಲಿ ಸ್ಯಾನಿಟೈಸ್ , ಥರ್ಮಲ್ ಸ್ಕ್ರಿನಿಂಗ್ ವ್ಯವಸ್ಥೆ ಮಾಡಲಾಗಿತ್ತು.. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಕಾಲೇಜು ಆವರಣದಲ್ಲಿ ಬಾಕ್ಸ್ ಗಳನ್ನು ಹಾಕಲಾಗಿತ್ತು. ಪ್ರತಿ ಡೆಸ್ಕ್ ಗೆ ಒಬ್ಬ ವಿದ್ಯಾರ್ಥಿ ಮಾತ್ರ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.