ಬೆಂಗಳೂರು : ನಾಳೆ 75 ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರ ಧ್ವಜಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ಎಲ್ಲೆಡೆ ರಾಷ್ಟ್ರ ಧ್ವಜಗಳು ಸಿಕ್ಕರೂ ಉತ್ಕೃಷ್ಟ ಮಟ್ಟದ ಧ್ವಜಗಳ ತಯಾರಿಕೆಗೆ ಕರ್ನಾಟಕ ಹೆಸರುವಾಸಿಯಾಗಿದೆ. ಹೌದು ಇದಕ್ಕೆ ಸಾಕ್ಷಿ ಎನ್ನುವಂತೆ ದೆಹಲಿಯ ಕೆಂಪುಕೋಟೆ ಸೇರಿ ರಾಷ್ಟ್ರದೆಲ್ಲೆಡೆ ಪ್ರಮುಖ ಪ್ರದೇಶಗಳಲ್ಲಿ ಹಾರಾಡುವ ರಾಷ್ಟ್ರ ಧ್ವಜದ ಬಟ್ಟೆ ತಯಾರಾಗೋದು ಧಾರವಾಡ ತಾಲೂಕಿನ ಗರಗದ ಖಾದಿ ಕೇಂದ್ರದಲ್ಲಿ ಎನ್ನುವುದು ಗಮನಾರ್ಹ ಸಂಗತಿ

ಈ ಕೇಂದ್ರವು 1956 ರಲ್ಲಿ ಆರಂಭವಾಗಿತ್ತು, ಆರಂಭದಲ್ಲಿ ಈ ಕೇಂದ್ರದಲ್ಲಿ ಖಾದಿ ಬಟ್ಟೆಗಳನ್ನು ನೆಯ್ಯಲಾಗುತ್ತಿತ್ತು. ಇಲ್ಲಿನ ಬಟ್ಟೆಯ ಗುಣಮಟ್ಟ ಅರಿತು ಇದೇ ಖಾದಿ ಕೇಂದ್ರಕ್ಕೆ ರಾಷ್ಟ್ರ ಧ್ವಜದ ಬಟ್ಟೆ ನಿರ್ಮಾಣಕ್ಕೆ ಖಾದಿ ಆಯೋಗ ಬಟ್ಟೆ ತಯಾರಿಸುವಂತೆ ಸೂಚನೆ ನೀಡುತ್ತದೆ. ಬಳಿಕ ಕೇಂದ್ರಕ್ಕೆ ಬೇಕಾದ ರಾಷ್ಟ್ರ ಧ್ವಜದ ಗುಣಮಟ್ಟದ ಬಟ್ಟೆಯ ತಯಾರಿಸಿ ಕೊಡಲು ಹೇಳಿದ್ದು 1974 ರಿಂದ ಇಂದಿನವರೆಗೆ ರಾಷ್ಟ್ರ ಧ್ವಜದ ಬಟ್ಟೆ ನೆಯ್ದು ಇಡೀ ದೇಶದಲ್ಲಿ ರಾಷ್ಟ್ರ ಧ್ವಜ ಹಾರಾಡುವಂತೆ ಮಾಡಿದೆ ಗರಗದ ಖಾದಿ ಕೇಂದ್ರ

ಗರಗ ಖಾದಿ ಕೇಂದ್ರಲ್ಲಿ 300 ಕ್ಕೂ ಹೆಚ್ಚು ಜನ ಮಹಿಳೆಯರು ನಿತ್ಯವು ಕೆಲಸ ಮಾಡುತ್ತಿದ್ದಾರೆ. ಗರಗ, ತಡಕೋಡ ಸೇರಿದಂತೆ ಗರಗ ಖಾದಿ ಕೇಂದ್ರ ಸುತ್ತಲಿನ ಗ್ರಾಮದಲ್ಲಿ ಮಹಿಳೆಯರು ನೂಲನ್ನು ನೆಯ್ದು ಕೇಂದ್ರಕ್ಕೆ ಕಳಿಸುತ್ತಾರೆ. ನೂಲನ್ನು ತಂದು ಗಂಜಿ ಹಾಕಿದ ಬಳಿಕ ಬಟ್ಟೆ ನೆಯ್ಯಲಾಗುತ್ತದೆ. ನೆಯ್ದ ಬಟ್ಟೆಯನ್ನು ಮುಂಬೈಗೆ ಕಳಿಸಲಾಗುತ್ತದೆ. ಅಲ್ಲಿ ಬಟ್ಟೆಗೆ ಬಣ್ಣ ಹಾಕುವುದು ಹಾಗೂ ಅಶೋಕ ಚಕ್ರ ಪ್ರಿಂಟ್ ಮಾಡಿ, ಬೇಡಿಕೆಗೆ ಅನುಗುಣವಾಗಿ ಅಳತೆಯಂತೆ ಧ್ವಜವನ್ನು ತಯಾರಿಸಲಾಗುತ್ತಿದೆ. ಹೀಗೆ ತಯಾರಿಸಿದ ರಾಷ್ಟ್ರ ಧ್ವಜವನ್ನು ಧಾರವಾಡ ಖಾದಿ ಕೇಂದ್ರ ಕಚೇರಿಗೆ ಕಳಿಸಲಾಗುತ್ತದೆ. ಬಳಿಕ ದೇಶದ ನಾನಾಭಾಗಗಳಿಗೆ ರಾಷ್ಟ್ರ ಧ್ವಜ ಮಾರಾಟ ಮಾಡಲಾಗುತ್ತಿದೆ.