ಭಾರತ ಸ್ವತಂತ್ರಗೊಂಡು 75 ವರ್ಷಗಳು ಸಂದಿವೆ. ಅಮೃತ ಮಹೋತ್ಸವದ ಹೆಸರಿನಲ್ಲಿ ಇಡೀ ವರ್ಷ ಹರ್ಷಾಚರಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕರೆ ಕೊಟ್ಟಿದೆ. 75 ವರ್ಷಗಳಲ್ಲಿ ದೇಶ ಹಲವು ಮೈಲಿಗಲ್ಲುಗಳನ್ನು ಸೃಷ್ಟಿಸಿ ಮುನ್ನುಗ್ಗುತ್ತಿದೆ. ವಿಶ್ವದಲ್ಲಿ ಪ್ರಬಲ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಈ ಸಂದರ್ಭದಲ್ಲಿ ರಾಜರ ಆಡಳಿತದಲ್ಲಿದ್ದ ಭಾರತ ಬ್ರಿಟಿಷರ ವಶವಾಗಿದ್ದು ಹೇಗೆ ಮತ್ತು ಅದನ್ನು ಮರಳಿ ಪಡೆಯಲು ಹೋರಾಟ ಹೇಗಿತ್ತು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡೊಣ
1757ರಿಂದ 1947ರ ಆಗಸ್ಟ್ 15ರವರೆಗೆ ನಡೆದ ಭಾರತದ ವಿವಿಧ ಸಂಘ-ಸಂಸ್ಥೆಗಳ ತತ್ವಗಳು, ದಂಗೆಗಳು, ಹೋರಾಟಗಳು ಮತ್ತು ಪ್ರಾಣಾಹುತಿಗಳ ಸಂಗಮವನ್ನು ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆಯಲಾಗುತ್ತದೆ. ಈ ಹಂತದಲ್ಲಿ ಹಲವು ಮಹತ್ವದ ಘಟನೆಗಳು ನಡೆದಿವೆ. ಹಲವು ಮಹನೀಯರ ತ್ಯಾಗದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ದಕ್ಕಿದೆ.
1757 ರಲ್ಲಿ ವಂಗದ ನವಾಬನಾಗಿದ್ದ ಸಿರಾಜುದ್ದೌಲನನ್ನು ಪ್ಲಾಸೀ ಕದನದಲ್ಲಿ ಪರಾಜಯಗೊಳಿಸುವ ಮೂಲಕ ಈಸ್ಟ್ ಇಂಡಿಯ ಕಂಪನಿಯ ಬ್ರಿಟಿಷ್ ಸೈನ್ಯ ಭಾರತದಲ್ಲಿ ಮೊದಲು ಅಸ್ತಿತ್ವ ಕಂಡುಕೊಂಡಿತು. ಈ ಯುದ್ಧದಲ್ಲಿ ನೆರವಾದ ಮೀರ್ ಜಾಫರನಿಗೆ ಪಟ್ಟಕಟ್ಟಿತು. ಮೀರ್ ಜಾಫರನ ಹಿಂದೆ ನಿಂತು ಆಡಳಿತ ನಡೆಸಲು ಬ್ರಿಟಿಷರು ಆರಂಭಿಸಿದರು. ಅಲ್ಪ ಕಾಲಾನಂತರ ಬ್ರಿಟಿಷ್ ಕಂಪನಿಯ ಅಧಿಕಾರಿ ರಾಬರ್ಟ್ ಕ್ಲೈವ್‍ನ ಉಪಾಯಗಳಿಂದ ವಂಗದ ಅಧಿಕಾರವನ್ನು ಮೀರ್ ಜಾಫರನಿಂದ ತನ್ನ ಕೈವಶಮಾಡಿಕೊಂಡನು. ಅಲ್ಲಿಂದ ಮುಂದೆ ಬಹುಬೇಗ ತಮ್ಮ ರಾಜಕೀಯ ನೀತಿಗಳಿಂದ ಭಾರತದ ಬಹುಭಾಗವನ್ನು ಅವರು ಕೈವಶ ಮಾಡಿಕೊಂಡರು.
ಪ್ಲಾಸೀ ಕದನದಿಂದ ಸರಿಯಾಗಿ ನೂರು ವರ್ಷಗಳ ನಂತರ ಅಂದರೆ 1857ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (ಸಿಪಾಯಿ ದಂಗೆ) ಆರಂಭವಾಯಿತು. ಆಂಗ್ಲರ ದಬ್ಬಾಳಿಕೆಯ ವಿರುದ್ಧ ಸಿಪಾಯಿಗಳೂ, ರಾಜ್ಯಗಳೂ ತಿರುಗಿಬಿದ್ದು ಪ್ರತಿಭಟಿಸಿದವಾದರೂ, ವ್ಯವಸ್ಥಿತವಾದ ಯೋಜನೆಯಿಲ್ಲದಿದ್ದರಿಂದ ದಂಗೆ ಹತ್ತಿಕ್ಕಲ್ಪಟ್ಟಿತು. ಸಿಪಾಯಿ ದಂಗೆ ವಿಫಲವಾದ ಮೇಲೆ, ಭಾರತದ ವಿದ್ಯಾವಂತರು ಎಚ್ಚೆತ್ತುಕೊಂಡರು ಹಾಗೂ ರಾಜಕೀಯವಾಗಿ ಸಂಘಟಿತರಾದರು.
1885ರಲ್ಲಿ ಸ್ಥಾಪಿತವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೊದಲು ಬ್ರಿಟಿಷ್ ಸಾಮ್ರಾಜ್ಯದ ಅಧೀನತೆಯಲ್ಲಿಯೇ ಭಾರತೀಯರಿಗೆ ಹೆಚ್ಚು ಹಕ್ಕು-ಪ್ರಾತಿನಿಧ್ಯಗಳಿಗಾಗಿ ಹೋರಾಟ ಪ್ರಾರಂಭಿಸಿತು. 20ನೇ ಶತಮಾನದ ಪ್ರಾರಂಭದ ವೇಳೆಗೆ ನಾಗರಿಕ ಸ್ವಾತಂತ್ರ್ಯ, ರಾಜಕೀಯ ಹಕ್ಕು, ಸಂಸ್ಕೃತಿ ಹಾಗೂ ದಿನನಿತ್ಯದ ಜೀವನದ ಮೇಲೆ ಬ್ರಿಟಿಷ್ ದಬ್ಬಾಳಿಕೆಯ ಆಡಳಿತದ ವಿರುದ್ಧ ಜನರ ದನಿ ಜೋರಾಗತೊಡಗಿ, ಬಾಲ ಗಂಗಾಂಧರ ತಿಲಕ ಮೊದಲಾದ ಕ್ರಾಂತಿಕಾರಿ ನೇತಾರರು ಸ್ವರಾಜ್ಯಕ್ಕೆ ಆಗ್ರಹಿಸತೊಡಗಿದರು.
1918 ಹಾಗೂ 1922ರ ನಡುವಿನ ಅವಧಿಯಲ್ಲಿ ಮೋಹನದಾಸ ಕರಮಚಂದ್ ಗಾಂಧಿ ( ಮಹಾತ್ಮ ಗಾಂಧಿ ) ನೇತೃತ್ವದಲ್ಲಿ ಅಹಿಂಸಾತ್ಮಕವಾದ ಅಸಹಕಾರ ಚಳವಳಿಯ ಮೊದಲ ಸರಣಿಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾರಂಭಿಸಿದೊಡನೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹತ್ವದ ದಿಕ್ಕು ದೊರೆಯಿತು. ಭಾರತದ ಎಲ್ಲೆಡೆಯಿಂದ ಅನೇಕ ಜನ ಈ ಆಂದೋಲನದಲ್ಲಿ ಭಾಗಿಗಳಾದರು. 1930ರಲ್ಲಿ ಪೂರ್ಣ ಸ್ವರಾಜ್ಯಕ್ಕೆ ಬದ್ಧವಾದ ಕಾಂಗ್ರೆಸ್ 1942ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎನ್ನುವ ಒತ್ತಾಯದ ಬೇಡಿಕೆಯನ್ನು ಮಾಡಿತು.
ಬ್ರಿಟಿಷ ಆಡಳಿತವನ್ನು ಕೊನೆಗೊಳಿಸಲು 1942ರಲ್ಲಿ ಸುಭಾಷಚಂದ್ರ ಬೋಸ್ ಭಾರತೀಯ ರಾಷ್ಟ್ರೀಯ ಸೈನ್ಯವನ್ನು ಸಂಘಟಿಸಿದರೂ ಅವರ ಅಕಾಲ ಮರಣದಿಂದ ಈ ಪ್ರಯತ್ನ ವಿಫಲವಾಯಿತು. ಎರಡನೇ ಮಹಾಯುದ್ಧದ ನಂತರ ಈ ಎಲ್ಲಾ ಪ್ರಯತ್ನಗಳ ಪರಿಣಾಮವಾಗಿ ಭಾರತ ಹಾಗೂ ಪಾಕಿಸ್ತಾನವೆಂದು ಇಬ್ಭಾಗಿಸುವ ದೇಶವಿಭಜನೆಯ ಬೆಲೆ ತೆತ್ತ ಬಳಿಕ, ಭಾರತದಲ್ಲಿ 15 ಆಗಸ್ಟ 1947 ರಂದು ಬ್ರಿಟಿಷ್ ಆಡಳಿತ ಅಂತ್ಯವಾಗಿ, ಸ್ವತಂತ್ರ ಭಾರತ ಉದಯವಾಯಿತು.