- ನೂರ್ ಆಯಿಷಾ, ಮಹರಾಜ ಕಾಲೇಜು ಮೈಸೂರು
ಬೆಂಗಳೂರು : ಈ ಹಿಂದೆ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಿ.ವೈ ವಿಜಯೇಂದ್ರರನ್ನ ಸೂಪರ್ ಸಿಎಂ ಎಂದು ಕರೆಯಲಾಗುತ್ತಿತ್ತು. ಈಗ ಬದಲಾದ ರಾಜಕೀಯ ಸನ್ನಿವೇಶಗಳಲ್ಲಿ ಬಸವರಾಜ್ ಬೊಮ್ಮಾಯಿ ಸರ್ಕಾರದಲ್ಲಿ ಬಿ.ಎಸ್ ಯಡಿಯೂರಪ್ಪ ಸೂಪರ್ ಸಿಎಂ ಆಗಿ ಹೊರ ಹೊಮ್ಮಿದರೇ ಎನ್ನುವ ಪ್ರಶ್ನೆ ಎದ್ದಿದೆ.
ಬಸವರಾಜ್ ಬೊಮ್ಮಾಯಿ ಸಿಎಂ ಆಗಿ ಆಯ್ಕೆಯಾದ ಬಳಿಕ ಬಿ.ಎಸ್ ಯಡಿಯೂರಪ್ಪ ಸರ್ಕಾರದ ಮೇಲೆ ಹಿಡಿತ ಸಾಧಿಸುತ್ತಿರುವಂತೆ ಕಂಡು ಬರುತ್ತಿದೆ. ಇದಕ್ಕೆ ಕಾರಣ ಯಡಿಯೂರಪ್ಪ ಮನೆಯ ಸುತ್ತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು.
ಬಸವರಾಜ್ ಬೊಮ್ಮಾಯಿ ಆಯ್ಕೆಯಲ್ಲಿ ಬಿಎಸ್‌ವೈ ಪಾತ್ರ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಈ ಕಾರಣಕ್ಕೆ ಬೊಮ್ಮಾಯಿ ಬಿಎಸ್‌ವೈ ನಿಷ್ಠರಾಗಿಯೂ ಇದ್ದಾರೆ. ಆದರೆ ಈ ನಿಷ್ಠೆ ಮತ್ತೊಂದು ಪವರ್ ಸೆಂಟರ್ ಉಗಮಕ್ಕೆ ಕಾರಣವಾಗಿದಿಯ? ಎನ್ನುವ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಜೋರಾಗಿದೆ.
ಬಸವರಾಜ್ ಬೊಮ್ಮಾಯಿ ಮಂತ್ರಿಮಂಡಲ ರಚನೆ ಮಾಡುವಾಗ ಯಾರನ್ನೇಲ್ಲ ಮಂತ್ರಿ ಮಾಡಬೇಕು ಎನ್ನುವುದನ್ನು ಬಹುತೇಕ ಅವರೇ ನಿರ್ಧರಿಸಿದ್ದರು ಎನ್ನಲಾಗುತ್ತೆ. ಬೊಮ್ಮಾಯಿ ಪಟ್ಟಿಯ ಜೊತೆಗೆ ಬಿಎಸ್‌ವೈ ಯಾರೇಲ್ಲ ಮಂತ್ರಿಗಳಾಗಬೇಕು ಎಂದು ಪ್ರತ್ಯೇಕ ಪಟ್ಟಿ ನೀಡಿ ಹೈಕಮಾಂಡ್‌ಗೆ ಕಳುಹಿಸಿಕೊಟ್ಟಿದ್ದರಂತೆ. ಈ ಮೂಲಕ ಹೊಸ ಕ್ಯಾಬಿನೆಟ್ ನಲ್ಲಿ ಹಳೆಯ ಸಚಿವರು ಮುಂದುವರಿಯುವಂತೆ ನೋಡಿಕೊಂಡಿದ್ದರು. ಸಂಪುಟ ರಚನೆಗೆ ಮುನ್ನ ಬಿಎಸ್‌ವೈ ಪವರ್ ಅರಿತಿದ್ದ ಬಹುತೇಕ ಹಿರಿಯ ನಾಯಕರು ಬೊಮ್ಮಾಯಿ ಬದಲು ಸಚಿವ ಸ್ಥಾನಕ್ಕಾಗಿ ಬಿಎಸ್‌ವೈ ನಿವಾಸಕ್ಕೆ ಪರೇಡ್ ನಡೆಸಿದ್ದರು.
ಈಗ ಸಂಪುಟ ರಚನೆಯಾಗಿದೆ, ಆದರೆ ಅಸಮಾಧಾನ ಮುಂದುವರಿದಿದೆ. ಸಚಿವ ಸ್ಥಾನ ಸಿಕ್ಕರೂ ಸೂಕ್ತ ಖಾತೆ ಸಿಕ್ಕಿಲ್ಲ ಅಂತಾ ಕೆಲವರು ಕಿರಿಕ್ ಮಾಡುತ್ತಿದ್ದರೇ ಮತ್ತೆ ಕೆಲವರು ಸಚಿವ ಸ್ಥಾನ ಸಿಕ್ಕಿಲ್ಲ ಅಂತಾ ಅತೃಪ್ತಿ ಹೊರ ಹಾಕುತ್ತಿದ್ದಾರೆ. ಒಂದೆಜ್ಜೆ ಮುಂದೆ ಹೋಗಿರುವ ಕೆಲವು ನಾಯಕರು ರಾಜೀನಾಮೆ ನಿರ್ಧಾರಗಳನ್ನು ಹೊರ ಹಾಕಲು ಸಿದ್ದವಾಗುತ್ತಿದ್ದಾರೆ.
ಸೂಕ್ತ ಖಾತೆ ಸಿಗದ ಹಿನ್ನಲೆ ಹೊಸಪೇಟೆ ಶಾಸಕ ಆನಂದಸಿಂಗ್ ಮತ್ತು ಎಂಟಿಬಿ ನಾಗರಾಜ್ ರಾಜೀನಾಮೆ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸಚಿವ ಸ್ಥಾನ ಸಿಗದಕ್ಕೆ ಬಿಎಸ್‌ವೈ ಮುಂದೆ ಅಸಮಾಧಾನ ಹೊರ ಹಾಕಿದ್ದ ಎಂ.ಪಿ ರೇಣುಕಚಾರ್ಯ, ರಮೇಶ್ ಜಾರಕಿಹೋಳಿ, ಸಿ.ಪಿ ಯೋಗೇಶ್ವರ್ ದೆಹಲಿಯತ್ತ ಮುಖ ಮಾಡಿದ್ದಾರೆ. ಈಗ ಡಬಲ್ ಟೆನ್ಷನ್‌ನಲ್ಲಿರುವ ಬೊಮ್ಮಾಯಿ ಮತ್ತೆ ಮಂಗಳವಾರ ತಡರಾತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸುಧೀರ್ಘ ಚರ್ಚೆ ಮಾಡಿದ್ದಾರೆ. ಹೀಗಾಗಿ ಬಿಎಸ್‌ವೈ ಈಗ ರಾಜ್ಯ ಬಿಜೆಪಿಯ ಪವರ್ ಸೆಂಟರ್ ಆಗಿ ಬದಲಾಗಿದ್ದು, ಬೊಮ್ಮಾಯಿ ಸರ್ಕಾರದಲ್ಲಿ ಸಮಸ್ಯೆ ಉದಯಿಸಿದಾಗ ಟ್ರಬಲ್ ಶೂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.