ಬೆಂಗಳೂರು(ಅ ೮): ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವ ಬಿಜೆಪಿ ಸರ್ಕಾರದ ನಡೆಗೆ ಯುಟಿ ಖಾದರ್ ಕಿಡಿ ಕಾರಿದ್ದಾರೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದಿರಾ ಗಾಂಧಿ ಅವರ ಹೆಸರಿರುವ ಯೋಜನೆಗಳನ್ನು ಬಿಜೆಪಿ ಅವರು ಬದಲಾವಣೆ ಮಾಡಬಹುದು. ಆದರೆ ಇಂದಿರಾ ಗಾಂಧಿ ಅವರ ಕೊಡುಗೆ ಹಾಗೂ ಅವರ ವ್ಯಕ್ತಿತ್ವವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಅವರು ದೇಶಕ್ಕೆ ಕೊಟ್ಟ ಅನೇಕ ಕೊಡುಗೆ, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಸ್ವಾಭಿಮಾನ ಮತ್ತು ನೆಮ್ಮದಿ ಬದುಕಿನ ಕಾರ್ಯಕ್ರಮ. ಸರ್ಕಾರಕ್ಕೆ ಹೆಸರು ಮುಖ್ಯವಾಗಬಾರದು. ಜನರು, ಬಡವರ ಪರವಾಗಿ ಮಾಡುವ ಕಾರ್ಯಕ್ರಮ ಮುಖ್ಯವಾಗಬೇಕು. ಬಡವರ ಹಸಿವು ನೀಗಿಸಲು ಮಾಡಲಾದ ಇಂದಿರಾ ಕ್ಯಾಂಟೀನ್ ಗೆ ಅನುದಾನ ಬಿಡುಗಡೆ ಮಾಡದೇ ಅದನ್ನು ಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಕೋವಿಡ್ ಸಮಯದಲ್ಲಿ ಈ ಇಂದಿರಾ ಕ್ಯಾಂಟೀನ್ ಅಗತ್ಯತೆ ಎಲ್ಲರಿಗೂ ಎಷ್ಟು ಮುಖ್ಯವಾಗಿತ್ತು ಎಂಬುದು ಜನರಿಗೆ ತಿಳಿದಿದೆ ಎಂದರು.

ಹೈಕೋರ್ಟ್ ನಿರ್ದೇಶನದ ನಂತರ ಈ ಯೋಜನೆಗೆ ಅನುದಾನ ಬಿಡುಗಡೆ ಮಾಡಲು ಆರಂಭಿಸಿದಿರಿ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ನಾನು ಆಹಾರ ಸಚಿವನಾಗಿದ್ದಾಗ ತಮಿಳುನಾಡಿಗೆ ಹೋಗಿ ಅಮ್ಮಾ ಕ್ಯಾಂಟೀನ್ ಅಧ್ಯಯನ ಮಾಡಲು ನಾನೇ ಹೋಗಿದ್ದೆ. ಅಲ್ಲಿ ಶುಚಿತ್ವ, ಉತ್ತಮ ಗುಣಮಟ್ಟದ ಆಹಾರ, ಬಡವರು ಮಾತ್ರವಲ್ಲ ಶ್ರೀಮಂತರೂ ಅಲ್ಲಿಗೆ ಬರುವಂತೆ ಇರಬೇಕು ಎಂದು ಇಂದಿರಾ ಕ್ಯಾಂಟೀನ್ ಆರಂಭಿಸಿದ್ದೆವು. ಆಗ ನಮ್ಮ ಮುಖ್ಯ ಉದ್ದೇಶ ಬಡವರಿಗೆ ಹಸಿವು ನೀಗಿಸುವುದು. ನಮ್ಮ ರಾಜ್ಯದಲ್ಲಿ ಯಾರೂ ಹಸಿವಿನಿಂದ ನರಳಬಾರದು ಎಂಬುದಾಗಿತ್ತು ಎಂದರು.
ಬೆಂಗಳೂರಿನಲ್ಲಿ ಕೂಲಿ ಕಾರ್ಮಿಕರು, ಚಾಲಕರು, ಬಸ್ ಕಂಡಕ್ಟರ್ ಗಳು ಬೆಳಗ್ಗೆ ತಿಂದರೆ ಮತ್ತೆ ಸಂಜೆ ಮನೆಗೆ ಹೋದಾಗ ತಿನ್ನುವ ಪರಿಸ್ಥಿತಿ ಇತ್ತು. ಮಧ್ಯಾಹ್ನ ಹೊರಗೆ ಊಟ ಮಾಡಲು ಹೋದರೆ 150 ರೂ. ಖರ್ಚು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕಾಲೇಜಿಗೆ ಹೋಗುತ್ತಿದ್ದ ಬಡ ವಿದ್ಯಾರ್ಥಿಗಳು ಮಧ್ಯಾಹ್ನದ ಊಟ ಮಾಡುತ್ತಿರಲಿಲ್ಲ. ಹೀಗಾಗಿ ಇವರು ಹಸಿವಿನಿಂದ ಕಲಿಕೆ, ದುಡಿಮೆ ಮಾಡಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಈ ಯೋಜನೆ ಜಾರಿಗೆ ತಂದಿತ್ತು. ಇಂದಿರಾ ಗಾಂಧಿ ಅವರ ಹೆಸರು ಯಾಕೆ ಸೂಕ್ತ ಎಂದರೆ, ಪಡಿತರ ಚೀಟಿ ಹಾಗೂ ನ್ಯಾಯಬೆಲೆ ಅಂಗಡಿ ವ್ಯವಸ್ಥೆಯನ್ನು ಇಂದಿರಾ ಗಾಂಧಿ ಅವರು ಜಾರಿಗೆ ತಂದು ದೇಶದಲ್ಲಿ ಆಹಾರ ಇಲ್ಲದೆ ಜನ ಹಸಿವಿನಿಂದ ಜೀವಿಸಬಾರದು ಎಂದು ಸರ್ಕಾರವೇ ದೇಶದುದ್ದಗಲಕ್ಕೆ ಈ ಯೋಜನೆ ಮೂಲಕ ಆಹಾರ ನೀಡಲು ಆರಂಭಿಸಿದ್ದರು. ಇಂತಹ ಪಡಿತರ ಚೀಟಿಯನ್ನು ಕೊಡುವ ಯೋಗ್ಯತೆ ಬಿಜೆಪಿ ಸರ್ಕಾರಕ್ಕಿಲ್ಲ. ಪಡಿತರ ಚೀಟಿ ಕೊಡುವುದನ್ನು ಸರ್ಕಾರ ನಿಲ್ಲಿಸಿದೆ. ಬಡವವರ ಆಹಾರ ಕಡಿತಗೊಳಿಸಿದೆ. ಇಂತಹ ಸರ್ಕಾರ ಅವರ ಹೆಸರನ್ನು ಬದಲಿಸಲು ಮುಂದಾಗಿದೆ. ಯೋಜನೆ ಹೆಸರಿಗಿಂತ ಜನಪರ ಕಾರ್ಯಕ್ರಮ ರೂಪಿಸಿ ಎಂದು ಆಗ್ರಹಿಸಿದರು.

ಇದು ಕೆಟ್ಟ ಸಂಪ್ರದಾಯವಾಗಿದ್ದು, ಮುಂದುವರಿದರೆ ಅಧಿಕಾರಕ್ಕೆ ಬರುವ ಸರ್ಕಾರಗಳು ಜನಪರ ಕಾರ್ಯಕ್ರಮ ತರುವ ಬದಲು ಹೆಸರು ಬದಲಾವಣೆ ಮಾಡುವುದನ್ನೇ ಸಾಧನೆ ಎಂದುಕೊಳ್ಳುತ್ತವೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಆರೋಗ್ಯ ಸಚಿವನಾಗಿದ್ದಾಗ ವಾಜಪೇಯಿ ಆರೋಗ್ಯ ಶ್ರೀ ಎಂದು ಕಲಬುರ್ಗಿ ವಲಯದಲ್ಲಿ 100 ಕೋಟಿ ರೂ. ಯೋಜನೆ ಜಾರಿಗೆ ತಂದಿದ್ದೆವು. ನಂತರ ಇದನ್ನು ರಾಜ್ಯದುದ್ದಗಲಕ್ಕೂ ಜಾರಿಗೆ ತಂದಿದ್ದೆವು. ಆಗ ಹೆಸರು ಬದಲಿಸಲು ಸಾಕಷ್ಟು ಒತ್ತಡ ಇದ್ದವು. ಆದರೂ ನಾವು ಹೆಸರು ಬದಲಾವಣೆ ಮಾಡಲಿಲ್ಲ. ವಸತಿ ಯೋಜನೆಯಲ್ಲಿ ವಾಜಪೇಯಿ ವಸತಿ ಯೋಜನೆ ಅಂತಾ ಮಾಡಿದರು. ಕಾಂಗ್ರೆಸ್ ಸರ್ಕಾರ ಅದರ ಹೆಸರು ಬದಲಾವಣೆ ಮಾಡಲಿಲ್ಲ. ಕಾಂಗ್ರೆಸ್ ಎಂದಿಗೂ ಇಂತಹ ಕೆಟ್ಟ ಸಂಪ್ರದಾಯ ಮಾಡುವುದಿಲ್ಲ. ಗಾಂಧಿ ಕುಟುಂಬದ ಹೆಸರನ್ನು ಜನರ ಮನಸ್ಸಿನಿಂದ ಅಳಿಸುವುದು ವ್ಯರ್ಥ ಪ್ರಯತ್ನವಾಗಿದ್ದು, ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಖಲಿಸ್ಥಾನ ಮಾಡುವ ಪಾಕಿಸ್ತಾನದ ಕುತಂತ್ರ ಮೆಟ್ಟಿ ನಿಂತಿದ್ದಕ್ಕೆ ಬಲಿಯಾದ ಇಂದಿರಾ ಗಾಂಧಿ ಅವರ ರಕ್ತ ಈ ದೇಶದ ಮಣ್ಣಲ್ಲಿ ಬೆರೆತಿದೆ. ಇನ್ನು ದಕ್ಷಿಣ ಭಾರತದಲ್ಲಿ ಶ್ರೀಲಂಕಾದ ಎಲ್ ಟಿಟಿ ದಾಳಿಗೆ ಬಲಿಯಾದ ರಾಜೀವ್ ಗಾಂಧಿ ಅವರ ರಕ್ತ ಮಣ್ಣಲ್ಲಿ ಬೆರೆತಿದೆ. ಹೀಗಾಗಿ ಗಾಂಧಿ ಕುಟುಂಬವನ್ನು ಜನರಿಂದ ದೂರ ಮಾಡಲು ಸಾಧ್ಯವಿಲ್ಲ. ಅವರ ಹೆಸರಿನ ಯೋಜನೆಗಳ ಮರುನಾಮಕರಣ ಅವರಿಗೆ ಮಾಡುವ ಅಗೌರವವಾಗಿದೆ ಎಂದರು.