ಭಾರತದ ಸ್ಟಾರ್ ಕುಸ್ತಿಪಟು ಬಜರಂಗ್ ಪುನಿಯಾ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪುರುಷರ ಫ್ರೀಸ್ಟೈಲ್ 65 ಕೆಜಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಕಜಕಿಸ್ತಾನದ ಡೌಲೆಟ್ ನಿಯಾಜ್‌ಬೆಕೊವ್ ಅವರನ್ನು 8-0 ಅಂತರದಿಂದ ಸೋಲಿಸಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ ಒಟ್ಟು 6ಕ್ಕೆ ಏರಿಕೆಯಾಗಿದೆ.

ಡೌಲೆಟ್ ನಿಯಾಜ್‌ಬೆಕೋವ್ ಈ ಮೊದಲು ಸೆನೆಗಲ್‌ನ ಡಯೆಟಾವನ್ನು 10-0 ಅಂಕಗಳಿಂದ ಸೋಲಿಸಿದ್ದರು. ನಿಯಾಜ್‌ಬೆಕೊವ್ ಹಾಗೂ ಬಜರಂಗ್ ಪೂನಿಯಾ ನಡುವೆ ವಿಭಿನ್ನ ಸಂಬಂಧವಿದೆ. ನಿಯಾಜ್‌ಬೆಕೊವ್ ಅವರು ಡರ್ಟಿ ಫೈಟ್ ಎಂದೇ ಖ್ಯಾತಿ ಪಡೆದಿದ್ದಾರೆ. ಇಂಥಹ ಆಟಗಾರ ಇಂದು ಸಹ ಪೂನಿಯಾ ಎದುರು ಶರಣಾಗತಿಯಾಗಿದ್ದಾರೆ. 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಹಾಗೂ 2 ತಿಂಗಳ ಹಿಂದೆ ಪೂನಿಯಾ ಡೌಲೆಟ್ ನಿಯಾಜ್‌ಬೆಕೊವ್ ಅವರನ್ನು ಸೋಲಿಸಿದ್ದರು.
ಸೆಮಿಫೈನಲ್ ಪಂದ್ಯದಲ್ಲಿ ಸೋಲು
ಸೆಮಿಫೈನಲ್ ತಲುಪಿದ್ದ ಪೂನಿಯಾ, ಮೂರು ಬಾರಿ ವಿಶ್ವ ಚಾಂಪಿಯನ್ ಅಜರ್ಬೈಜಾನ್‌ನ ಹಾಜಿ ಅಲಿಯೇವ್ ವಿರುದ್ಧ ಸ್ಪರ್ಧಿಸಿದ್ದರು. ಹಾಜಿ ಅಲಿಯೇವ್ ಅವರ ಅವರ ವಿರುದ್ಧ 5-12 ಅಂತರದಿಂದ ಸೋಲನ್ನು ಅನುಭವಿಸಿದರು.

ಗಾಯದೊಂದಿಗೆ ರೋಚಕ ಹೋರಾಟ
ಬಜರಂಗ್ ಪುನಿಯಾ ಅವರ ಮೊಣಕಾಲಿಗೆ ಗಾಯವಾಗಿತ್ತು. ಇದು ಒಲಂಪಿಕ್ಸ್‌ನಲ್ಲಿ ಪೂನಿಯಾ ಅವರಿಗೆ ದೊಡ್ಡ ಅಘಾತ ನೀಡಿತ್ತು. ಭಜರಂಗ್ ತನ್ನ ಲಿಗಮೆಂಟ್‌ನ್ನು ಒತ್ತಡದಿಂದ ರಕ್ಷಿಸಲು ಬಲ ಮೊಣಕಾಲಿನ ಮೇಲೆ ಸಾಕಷ್ಟು ಬ್ಯಾಂಡೇಜ್ ಸುತ್ತಿಕೊಂಡು ಹೋರಾಡಿದ್ದಾರೆ. ಸೆಮಿಫೈನಲ್ ಪಂದ್ಯದ ಕೊನೆಯ ಒಂದು ನಿಮಿಷದ ವೇಳೆಯಲ್ಲಿಯೂ ಅವರ ಆರೋಗ್ಯ ಹದಗೆಟ್ಟಿತ್ತು. ಎದುರಾಳಿಗಳು ಮಂಡಿಯನ್ನೆ ಗುರಿಯಾಗಿಸಿಕೊಂಡು ಹೋರಾಡಲು ಯತ್ನಸುತ್ತಿದ್ದರು. ಆದರೂ ಇಂದು ನಡೆದ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ.