ಬೆಂಗಳೂರು : ರವಿ ಡಿ. ಚೆನ್ನಣ್ಣನವರ್ ಅವರು ಇರುವ ಒಂದು ಪೊಟೊ ಈಗ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಯಶಸ್ವಿ ಐಪಿಎಸ್ ಅಧಿಕಾರಿ ಎಂದು ಕರೆಸಿಕೊಂಡಿರುವ ಅವರು ಭವಿಷ್ಯದಲ್ಲಿ ರಾಜಕೀಯ ಪ್ರವೇಶ ಮಾಡಲಿದ್ದಾರಾ? ಎನ್ನುವ ಪ್ರಶ್ನೆಗಳನ್ನು ಆ ಪೊಟೊ ಮೂಡಿಸಿದೆ.
ಹೌದು, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ ನಿವಾಸಕ್ಕೆ ರವಿ ಡಿ ಚೆನ್ನಣ್ಣನವರ್ ಭೇಟಿ ನೀಡಿದ್ದಾರೆ. ಕಳೆದ ಮಂಗಳವಾರ ನವದೆಹಲಿಯಲ್ಲಿರುವ ಬಿ.ಎಲ್ ಸಂತೋಷ ನಿವಾಸಕ್ಕೆ ರವಿ ಡಿ ಚೆನ್ನಣ್ಣನವರ್ ಭೇಟಿ ನೀಡಿದ್ದ ಪೊಟೊ ವೈರಲ್ ಆಗಿದ್ದು, ಭೇಟಿ ವೇಳೆ ಮಹತ್ವದ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಮಂಗಳವಾರ ಸಿಎಂ ಬಸವರಾಜ್ ಬೊಮ್ಮಾಯಿ ದೆಹಲಿಯಲ್ಲಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಮ್ಮುಖದಲ್ಲಿ ಕೊಳ್ಳೆಗಾಲದ ಶಾಸಕ ಎನ್ ಮಹೇಶ ಅವರನ್ನು ಬಿಜೆಪಿ ಸೇರ್ಪಡೆ ಬಗ್ಗೆ ಮಾತುಕತೆ ನಡೆದಿತ್ತು. ಇದೇ ಸಂದರ್ಭದಲ್ಲಿ ರವಿ ಡಿ ಚೆನ್ನಣ್ಣನವರ್ ಕೂಡಾ ಉಪಸ್ಥಿತರಿದ್ದರು ಎಂದು ಹೇಳಲಾಗುತ್ತಿದೆ.

ಯುವ ಸಮುದಾಯಕ್ಕೆ ಸ್ಫೂರ್ತಿಯಾಗಿರುವ ರವಿ ಡಿ ಚೆನ್ನಣ್ಣನವರ್ ತಮ್ಮ ಭಾಷಣಗಳಿಂದ ಖ್ಯಾತರಾಗಿದ್ದಾರೆ. ಇವರ ಒಂದೊಂದು ವಿಡಿಯೋಗೂ ಮಿಲಿಯನ್ ವಿವ್ಯೂಗಳು ಸೋಶಿಯಲ್ ಮಿಡಿಯಾಗಳಲ್ಲಿದೆ. ಒಂದು ರೀತಿಯಲ್ಲಿ ಜನಪ್ರಿಯ ಅಧಿಕಾರಿಯಾಗಿ ಹೊರ ಹೊಮ್ಮುತ್ತಿರುವ ಇವರು ರಾಜಕೀಯ ಸೇರುವ ಇಚ್ಛೆ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಬಿಜೆಪಿ ಕೂಡಾ ಈನಡುವೆ ಐಎಎಸ್ ಐಪಿಎಸ್ ನಂತಹ ಅಧಿಕಾರಿಗಳಿಗೆ ಅವಕಾಶ ನೀಡುತ್ತಿದ್ದು ಕಳೆದ ವರ್ಷ ರಾಜ್ಯದ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿ ಸೇರ್ಪಡೆಗೆ ಅವಕಾಶ ನೀಡಲಾಗಿತ್ತು. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಜನಪ್ರಿಯಗೊಂಡಿರುವ ರವಿ ಡಿ ಚೆನ್ನಣ್ಣನವರ್ ಅವರನ್ನು ಬಿಜೆಪಿ ಸೆಳೆಯುತ್ತಿದ್ದು ರಾಜ್ಯದಲ್ಲಿ ಅವರ ಜನಪ್ರಿಯತೆ ಬಳಸಿಕೊಳ್ಳಲು ಪ್ಲ್ಯಾನ್ ಮಾಡಿದೆ.

ಗದಗ ಜಿಲ್ಲೆಯ ಮೂಲದ ಈ ಅಧಿಕಾರಿಯನ್ನು ಮುಂದಿನ ಲೋಕಸಭೆ ಅಥಾವ ವಿಧಾನಸಭೆ ಚುನಾವಣೆಗೆ ಅಖಾಡಕ್ಕೆ ಇಳಿಸಲು ತಯಾರಿ ನಡೆದಿದೆ ಎಂದು ಹೇಳಲಾಗಿದ್ದು ಆ ಬಗ್ಗೆ ಕಳೆದ ಮಂಗಳವಾರ ಮಾತುಕತೆ ನಡೆದಿದೆಯಂತೆ. ಬಿ.ಎಲ್ ಸಂತೋಷ್ ಭೇಟಿಗೂ ಮುನ್ನ ರವಿ ಡಿ ಚೆನ್ನಣ್ಣನವರ್ ಮಠಗಳು ಮಠಧೀಶರು ಮತ್ತು ದೇವಸ್ಥಾನಗಳಿಗೆ ತೆರಳಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಆದರೆ ಈ ಬಗ್ಗೆ ಸೋಶಿಯಲ್ ಮಿಡಿಯಾಗಳಲ್ಲಿ ಸ್ಪಷ್ಟನೆ ನೀಡಿರುವ ರವಿ ಡಿ ಚೆನ್ನಣ್ಣನವರ್ ಬಿಜೆಪಿ ಸೇರುವ ಯಾವುದೇ ಉದ್ದೇಶ ಇಲ್ಲ, ಕೆಲವು ಹಿರಿಯ ನಾಯಕರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದ್ದು ರಾಜಕೀಯ ಪ್ರವೇಶ ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ.