ಬೇಲೂರು(ಜೂಲೈ-31): ಇಲ್ಲಿನ ಚೌಡನ ಹಳ್ಳಿ ಸಮೀಪ ಮಂಗಗಳ ಮಾರಣಹೋಮ ನಡೆದ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಎನ್.ಗಿರೀಶ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಎನ್.ಗಿರೀಶ್, ಜುಲೈ 28 ರಂದು ಚೌಡನಹಳ್ಳಿ ಗ್ರಾಮದ ಬಳಿ 35 ಮಂಗಗಳನ್ನು ಕೊಂದು ಗುಡ್ಡೆ ಹಾಕಲಾಗಿತ್ತು. ಮರು ದಿನ ಡಿಸಿಎಫ್ ಅವರು ಬಂದು ಪರಿಶೀಲಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲದಲ್ಲಿನ ಮರಣೋತ್ತರ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದೇವೆ ಎಂದರು.

ಮಂಗಗಳನ್ನು ಕೊಂದು ಹಾಕಿರುವು ಅಮಾನವೀಯ ಘಟನೆ. ಮಂಗಗಳನ್ನು ನಾವು ಧರ್ಮದ ಆಧಾರದಲ್ಲೂ ನೋಡುತ್ತೇವೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಹೈಕೋರ್ಟ್ ಸ್ವಯಂಪ್ರೇರಿತವಾಗಿ ದೂರನ್ನು ದಾಖಲಿಸಿಕೊಂಡಿದೆ. ಪ್ರಿನ್ಸಿಫಲ್ ಚೀಫ್ ಕನ್ಸರ್‌ವೇಟರ್ ಫಾರೆಸ್ಟ್, ಜಿಲ್ಲಾಧಿಕಾರಿ, ಎಸ್‌ಪಿ, ಡಿಎಫ್‌ಒಯವರು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ. ನ್ಯಾಯಾಲಯಕ್ಕೆ ಅಗಸ್ಟ್4ರೊಳಗೆ ವರದಿ ನೀಡಬೇಕಿದೆ. ಈ ಹಿನ್ನಲೆಯಲ್ಲಿ ಇಂದು ಭೇಟಿ ನೀಡಿ, ಗ್ರಾಮಸ್ಥರಿಂದ ಅಗತ್ಯ ಮಾಹಿತಿ ಪಡೆದುಕೊಂಡಿದ್ದೇವೆ. ತನಿಖೆಯನ್ನು ಪಕ್ಷಪಾತ ಹಾಗೂ ವಿಳಂಬವಿಲ್ಲದೆ ಮಾಡಲಾಗುವುದು ಎಂದು ತಿಳಿಸಿದರು.

ಮಂಗಗಳನ್ನು ಕೊಂದು ತಂದು ಹಾಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಪ್ರಥಮವಾಗಿ ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅರಣ್ಯ ಅಧಿಕಾರಿಗಳ ವರದಿಯಂತೆ ನಾವೂ ಎಫ್‌ಐಆರ್ ದಾಖಲಿಸಿಕೊಂಡಿದ್ದೇವೆ. ಎಲ್ಲಾ ರೀತಿಯಲ್ಲೂ ತನಿಖೆ ಮಾಡಲಾಗುತ್ತಿದೆ. ಶೀಘ್ರವೆ ಆರೋಪಿಗಳ ಪತ್ತೆ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಅವರು ತಿಳಿಸಿದರು.

ಈ ವೇಳೆ ಭಜರಂಗದಳದ ತಾಲೂಕು ಸಂಚಾಲಕ ಮಂಜುನಾಥ್ ಹಾಗೂ ಇತರರು ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದರು. ತಹಸೀಲ್ದಾರ್ ಮೋಹನಕುಮಾರ್, ಗ್ರಾಮೀಣ ಸಿಪಿಐ ಶ್ರೀಕಾಂತ್, ನಗರ ಸಿಪಿಐ ಯೋಗೇಶ್, ಆರ್‌ಎಫ್‌ಒ ಯಶ್ಮಮಾಚಮ್ಮ, ಪಿಎಸ್‌ಐ ಮಹೇಶ್, ವಿಶ್ವಹಿಂದೂಪರಿಷತ್ ಅಧ್ಯಕ್ಷ ಕೃಷ್ಣೇಗೌಡ, ಮೋಹನ್, ವಿರೂಪಾಕ್ಷ, ಯತೀಶ್, ದಿಲೀಪ್ ಉಪಸ್ಥಿತರಿದ್ದರು.