ಕೆಲಸ ವಿಳಂಬ ಮಾಡದೆ ದಕ್ಷತೆಯಿಂದ ನಿಷ್ಪಕ್ಷಪಾತವಾಗಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.
ಈ ವೇಳೆ, ಸರ್ಕಾರದ ಆಡಳಿತ ಒಂದು ನಿರಂತರ ಪ್ರಕ್ರಿಯೆ. ಅಧಿಕಾರಿಗಳು ಮ್ಯಾಕ್ರೊ ಲೆವೆಲ್ ಮಾತ್ರ ಅಲ್ಲ ಮೈಕ್ರೊ ಲೆವೆಲ್ ಆಗಬೇಕು. ಇಲಾಖೆಗಳ ನಡುವೆ ಸಹಕಾರ ಮುಖ್ಯ. ಕೆಲಸ ವಿಳಂಬ ಮಾಡುವುದು ಭ್ರಷ್ಟಾಚಾರ ಹಾಗೂ ವೆಚ್ಚ ಹೆಚ್ಚಳಕ್ಕೆ ಕಡಿವಾಣ ಹಾಕಬೇಕು ಎಂದು ಎಚ್ಚರಿಸಿದ್ದಾರೆ. ಅಧಿಕಾರಿಗಳು ಇನ್ನು ಮುಂದೆ ಚಲ್ತಾ ಹೈ ಎಂಬ ಧೋರಣೆ ಸಹಿಸುವುದಿಲ್ಲ. ಮುಕ್ತವಾಗಿ ಚರ್ಚಿಸಲು ಅಧಿಕಾರಿಗಳಿಗೆ ಅವಕಾಶವಿದೆ ಎಂದು ತಿಳಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಶಿಸ್ತು ತರುವುದು ಮುಖ್ಯ. ಮಾರ್ಚ್ ಒಳಗೆ ಕನಿಷ್ಟ 5% ರಷ್ಟು ವೆಚ್ಚ ಕಡಿಮೆ ಮಾಡಬೇಕು ಎಂದರು.
ಯಾವುದೇ ಯೋಜನೆಗಳಿಗೆ ಕತ್ತರಿ ಹಾಕದೆ ವೆಚ್ಚ ಕಡಿಮೆ ಮಾಡಬೇಕು. ನಿರ್ಣಯಗಳು ಹಲವಾರು ಸಂದರ್ಭದಲ್ಲಿ ವಿಳಂಬ ಮಾಡಲಾಗುತ್ತಿದೆ. ಕೆಲವೊಂದು ಫೈಲ್‌ಗಳನ್ನು ಪೂರ್ತಿಗೊಳಿಸುವುದು ಅಗತ್ಯವಾಗಿದೆ. ಅಪ್ ಟು ಡೇಟ್ ಫೈಲ್ ಜಾರಿಯಾಗಬೇಕು. ಸಮಯ ನಿಗದಿಯಾಗಿ ಸರ್ಕಾರಿ ಯೋಜನೆಗಳು ಜನರಿಗೆ ತಲುಪಬೇಕು. ಆರ್ಥಿಕ ಸ್ಥಿತಿಗತಿ ಉತ್ತಮಗೊಳಿಸಬೇಕು. ಯೋಜನಾ ವೆಚ್ಚದ ಜೊತೆಗೆ ಬೇರೆ ವೆಚ್ಚದ ಬಗ್ಗೆ ಪ್ರತ್ಯೇಕ ಸಭೆ ನಡೆಸಲಾಗುವುದು. ಕೊವಿಡ್ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು ಎಂದು ತಿಳಿಸಿದರು.