ಬೆಂಗಳೂರು : ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬಿ.ಎಸ್ ಯಡಿಯೂರಪ್ಪರಿಂದ ತೆರವಾಗಿದ್ದ ಸ್ಥಾನಕ್ಕೆ ನೂತನ ಸಿಎಂ ಯಾರು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.
ಇಂದು ವೀಕ್ಷಕರಾದ ಧರ್ಮೇಂದ್ರ ಪ್ರಧಾನ ಮತ್ತು ಜಿ.ಕಿಶನ್ ರೆಡ್ಡಿ ನೇತೃತ್ವದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿ.ಎಸ್ ಯಡಿಯೂರಪ್ಪ ತಮ್ಮ ಆಪ್ತ ಬಸವರಾಜ್ ಬೊಮ್ಮಾಯಿ ಹೆಸರು ಪ್ರಸ್ತಾಪಿಸಿದರು. ಈ ಮೂಲಕ ಗೃಹ ಸಚಿವರಾಗಿದ್ದ ಬೊಮ್ಮಾಯಿ ಅವರಿಗೆ ಬಡ್ತಿ ಸಿಕ್ಕಿದ್ದು ಸಿಎಂ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಕೌಟುಂಬಿಕ ಹಿನ್ನಲೆ ಮತ್ತು ಆರಂಭಿಕ ಜೀವನ
ಬಸವರಾಜ ಬೊಮ್ಮಾಯಿ 28-01-1960ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದರು. ತಂದೆ ಎಸ್. ಆರ್ ಬೊಮ್ಮಾಯಿ, ಅವರು ಕೂಡಾ ರಾಜ್ಯದ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವರು ಆಗಿ ಸೇವೆ ಸಲ್ಲಿಸಿದ್ದರು. ತಾಯಿ ಗಂಗಮ್ಮ ಎಸ್ ಬೊಮ್ಮಾಯಿ. ಬೊಮ್ಮಾಯಿ ಧರ್ಮಪತ್ನಿಯ ಹೆಸರು ಚೆನ್ನಮ್ಮ ಬೊಮ್ಮಾಯಿಯಾಗಿದ್ದು ಭರತ, ಅದಿತಿ ಹೆಸರಿನ ಇಬ್ಬರು ಮಕ್ಕಳಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು ಪ್ರಾಥಮಿಕ ಮತ್ತು ಮಧ್ಯಮ ವಿದ್ಯಾಭ್ಯಾಸವನ್ನು ಹುಬ್ಬಳ್ಳಿ ನಗರದಲ್ಲಿರುವ ರೋಟರಿ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಪೂರೈಸಿದರು. ಹುಬ್ಬಳ್ಳಿಯ ಪಿ.ಸಿ ಜಾಬಿನ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪಿಯುಸಿ ಮುಗಿಸಿದರು. ನಂತರ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಹುಬ್ಬಳ್ಳಿಯ ಬಿ.ವಿ ಭೂಮರೆಡ್ಡಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪೂರೈಸಿದರು.

ಆರಂಭದಲ್ಲಿ ಕೈಗಾರಿಕಾ ಉದ್ಯಮಿಯಾಗಿದ್ದ ಅವರು ಹಾಗೂ 1983 ರಿಂದ 1985ರವರೆಗೆ ಪುಣೆ ಟೆಲ್ಕೋ ಕಂಪನಿಯಲ್ಲಿ ಎರಡು ವರ್ಷ ತಾಂತ್ರಿಕ ತರಬೇತಿಯನ್ನು ಪಡೆದುಕೊಂಡರು. ಇದಾದ ನಂತರ ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಕೆಲಕಾಲ ಕೆಲಸ ನಿರ್ವಹಿಸಿದರು.
ಹೋರಾಟದ ಹಿನ್ನಲೆ ಮತ್ತು ರಾಜಕೀಯ ಪ್ರವೇಶ
ಕಾಲೇಜು ವಿದ್ಯಾಭ್ಯಾಸದ ದಿನದಿಂದಲೇ ಸಾಮಾಜಿಕ ಹಾಗೂ ರಾಜಕೀಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರು, 2007 ಜುಲೈನಲ್ಲಿ ಧಾರವಾಡದಿಂದ ನರಗುಂದದ 232 ಕಿಲೋಮೀಟರ್ 21 ದಿನಗಳ ಪಾದಯಾತ್ರೆಯನ್ನು ನಡೆಸಿದರು.
1993ರಲ್ಲಿ ಹುಬ್ಬಳ್ಳಿ ನಗರದಲ್ಲಿ ನಡೆದ ರಾಜ್ಯ ಯುವ ಜನತಾದಳದ ಐತಿಹಾಸಿಕ ಬೃಹತ್ ರ್ಯಾಲಿಯ ನೇತೃತ್ವವನ್ನು ವಹಿಸಿದರು. ನಂತರ 1995 ರಲ್ಲಿ ಹುಬ್ಬಳ್ಳಿ ನಗರದ ಈದ್ಗಾ ಮೈದಾನದ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ರಾಜ್ಯ ಸರ್ಕಾರದ ಮೂಲಕ ನೇತೃತ್ವವನ್ನು ವಹಿಸಿ ಪ್ರಸಿದ್ಧಿ ಪಡೆದರು.

ಸಂಘಟನೆಯಲ್ಲಿ ಸಕ್ರೀಯರಾಗಿ ಹಿರಿಯ ನಾಯಕರ ಸಮ್ಮುಖದಲ್ಲಿ ಗುರುತಿಸಿಕೊಂಡಿದ್ದ ಬೊಮ್ಮಾಯಿಯವರು. 1996 ರಲ್ಲಿ ರಾಜ್ಯದ ಜನತಾದಳ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. 1996 ರಿಂದ 1997ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಜೆ.ಎಚ್ ಪಟೇಲ್‌ರವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡರು.
31-12- 1997 ಹಾಗೂ 04-12- 2013ರಲ್ಲಿ ರಾಜ್ಯ ವಿಧಾನಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿ ಸತತ ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದರು. 20-25-2008 ರಂದು ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದರು.

ಹಿಂದೆ ಬಿ.ಎಸ್ ಯಡಿಯೂರಪ್ಪ, ಡಿ.ವಿ ಸದಾನಂದ ಗೌಡ ಹಾಗೂ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. 2013ರಲ್ಲಿ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವಿ ವಿಧಾನಸಭಾ ಮತ ಕ್ಷೇತ್ರದ ದ್ವಿತೀಯ ಬಾರಿಗೆ ಆಯ್ಕೆಯಾದರು. 2018 ರಲ್ಲಿ ಮತ್ತೆ ಅದೇ ಕ್ಷೇತ್ರದಿಂದ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಈಗ ರಾಜ್ಯದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.