ಬೆಂಗಳೂರು : ಬಿ.ಎಸ್ ಯಡಿಯೂರಪ್ಪ ರಾಜೀನಾಮೆಯಿಂದ ತೆರವಾಗಿದ್ದ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ್ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಇಂದು ರಾಜಭವನ ರಸ್ತೆಯಲ್ಲಿರುವ ಕ್ಯಾಪಿಟಲ್ ಹೋಟೆಲ್‌ನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಮುಂದಿನ ಸಿಎಂ ಆಗಿ ಅವರನ್ನು ಆಯ್ಕೆ ಮಾಡಲಾಗಿದೆ.
ಸಿಎಂ ಆಯ್ಕೆ ಹಿನ್ನಲೆ ವೀಕ್ಷಕರಾಗಿ ಧರ್ಮೇಂದ್ರ ಪ್ರಧಾನ್ ಮತ್ತು ಜಿ ಕಿಶನ್ ರೆಡ್ಡಿ ಜೊತೆಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಿದ್ದರು. ಏಳು ಗಂಟೆಗೆ ನಡೆದ ಕೋರ್ ಕಮೀಟಿ ಸಭೆಯಲ್ಲಿ ಬಸವರಾಜ್ ಬೊಮ್ಮಾಯಿ ಹೆಸರನ್ನು ಧರ್ಮೇಂದ್ರ ಪ್ರಧಾನ್ ಪ್ರಸ್ತಾಪಿಸಿದರು. ಬಳಿಕ ಹೈಕಮಾಂಡ್ ಆಯ್ಕೆಯನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರಿಗೆ ತಿಳಿಸಲಾಯಿತು.

ಆಡಳಿತ ಅನುಭವಕ್ಕೆ ಹೈಕಮಾಂಡ್ ಆದ್ಯತೆ ನೀಡಿದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಬೊಮ್ಮಾಯಿ ತಮ್ಮ ರಾಜಕೀಯ ಅನುಭವದಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿದ್ದರು. ರಾಜ್ಯದಲ್ಲಿ ಚುನಾವಣೆ ಸವಾಲುಗಳನ್ನು ನಿರ್ವಹಿಸಬೇಕಿದ್ದು, ಶಾಸಕರನ್ನು ವಿಶ್ವಾಸಕ್ಕೆ ಗಳಿಸುವಲ್ಲಿ ಬೊಮ್ಮಾಯಿ ಯಶಸ್ವಿಯಾಗಬಹುದು, ಹೊಂದಾಣಿಕೆ ಮೂಲಕ ಗೊಂದಲಗಳಿಲ್ಲದೆ ಸರ್ಕಾರ ಮುನ್ನೇಡಸಬಹುದು ಎನ್ನುವ ಕಾರಣಕ್ಕೆ ಬೊಮ್ಮಾಯಿ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.
ನಾಳೆ ರಾಜಭವನದಲ್ಲಿ ಮಧ್ಯಾಹ್ನ 3:35ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.