ಬೆಂಗಳೂರು(ಜೂ.27): ಹೊಸ ಸಿಎಂ ಆಯ್ಕೆ ಕುರಿತಂತೆ ರಾಜ್ಯ ರಾಜಕೀಯದಲ್ಲಿ ಕ್ಷಣ-ಕ್ಷಣಕ್ಕೂ ಬೆಳವಣಿಗೆಗಳಾಗುತ್ತಿವೆ. ಹೊಸ ಮುಖ್ಯಮಂತ್ರಿ ಆಯ್ಕೆ ಸಂಬಂಧ ಇಂದು ರಾತ್ರಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ನಗರದ ಕ್ಯಾಪಿಟಲ್ ಹೊಟೇಲ್‌ನಲ್ಲಿ ಈ ಸಭೆ ನಡೆಯಲಿದೆ. ಈಗಾಗಲೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಡಿ.ಕೆ.ಅರುಣ ಮತ್ತು ದೆಹಲಿಗೆ ತೆರಳಿದ್ದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಅಲ್ಲದೆ, ದೆಹಲಿಯಿಂದ ವೀಕ್ಷಕರಾಗಿ ಕೇಂದ್ರ ಸಚಿವರಾದ ಕಿಶನ್ ರೆಡ್ಡಿ ಮತ್ತು ಧರ್ಮೇಂದ್ರ ಪ್ರಧಾನ್ ಅವರು ಆಗಮಿಸಿದ್ದಾರೆ.

ವಿಶೇಷವೆಂದರೆ, ಶಾಸಕಾಂಗ ಪಕ್ಷದ ಸಭೆಗೆ ಬಿಎಸ್ ಯಡಿಯೂರಪ್ಪನವರನ್ನು ಆಹ್ವಾನಿಸಲಾಗಿದೆ. ಮೂಲಗಳ ಪ್ರಕಾರ ಯಡಿಯೂರಪ್ಪನವರ ಸೂಚನೆಯಂತೆಯೇ ಸಿಎಂ ಆಯ್ಕೆ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ. ಹೀಗಾಗಿ, ರಾತ್ರಿ 7.30 ಗೆ ನಡೆಯುವ ಸಭೆಗೆ ಯಡಿಯೂರಪ್ಪ ಬರ್ತಾರಾ ಎಂಬುದು ಕುತೂಹಲ ಮೂಡಿಸಿದೆ.

ಸಭೆಯಲ್ಲಿ ಮೊದಲಿಗೆ ಹೊಸ ಮುಖ್ಯಮಂತ್ರಿ ಆಯ್ಕೆ ಕುರಿತು ಮಾಹಿತಿ ಸಂಗ್ರಹಿಸಿ ಬಳಿಕ ಹೆಸರು ಪ್ರಕಟಿಸಬಹುದು ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಯಾರನ್ನೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರು ಎಲ್ಲರೂ ಸರ್ವಾನುಮತದಿಂದ ಬೆಂಬಲ ಸೂಚಿಸುವಂತೆ ತಿಳಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಬೇಗನೆ ಮುಗಿಸಿ ಗುರುವಾರದ ವೇಳೆಗೆ ಹೊಸ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಬುಧವಾರವೇ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯಪಾಲರ ಕಚೇರಿಯಿಂದ ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ.