ಬೆಂಗಳೂರು; ಸಿಎಂ ಬಿ.ಎಸ್.ಯಡಿಯೂರಪ್ಪ ಬೆಂಬಲಕ್ಕೆ ನಿಂತ ಮಠಾಧೀಶರ ನಡೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ಹೊರಹಾಕಿದ್ದಾರೆ. ಇಂದು ಬಹುತೇಕ ಸ್ವಾಮೀಜಿಗಳು ಸಿಎಂ ರಾಜೀನಾಮೆ ನೀಡಬಾರದೆಂದು ಒತ್ತಡ ಹಾಕಲು ಬಹಿರಂಗ ಸಮಾವೇಶ ಆಯೋಜನೆ ಮಾಡಿದ್ದಾರೆ.
ಯತ್ನಾಳ್ ಹೇಳಿದ್ದೇನು?
ರಾಜಕೀಯದಲ್ಲಿ ಧರ್ಮವಿರಬೇಕು, ಆದರೆ ಧರ್ಮದಲ್ಲಿ ಎಂದೂ ರಾಜಕೀಯ ಬೆರೆಸಬಾರದು ಎಂಬ ತತ್ವದಡಿ, ಎಂದೂ ಯಾವುದೇ ಮಠ-ಮಾನ್ಯಗಳ ಮಠಾಧೀಶರನ್ನು ನೇಮಿಸುವಾಗ ರಾಜಕೀಯ ಪ್ರವೇಶಿಸಬಾರದು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕೆಲವೇ ಕೆಲವು ವೀರಶೈವ-ಲಿಂಗಾಯತ ಮಠಾಧೀಶರು ವ್ಯಕ್ತಿಯೊಬ್ಬರ ಪರವಾಗಿ ಬೀದಿಗೆ ಬಂದು ಲಾಬಿ ಮಾಡುವುದರಿಂದ, ರಾಜ್ಯದ ವಿವಿಧ ಸಮುದಾಯದವರು ಆ ಸಮುದಾಯದ ಮಠಾಧೀಶರ ಮೇಲೆ ವ್ಯತಿರಿಕ್ತ ಪರಿಣಾಮವಾಗಿ, ರಾಜಕೀಯ ಸಂಚಲನ ಉಂಟುಮಾಡುತ್ತದೆ. ಇದರಿಂದ ನಮ್ಮ ಸಮಾಜಕ್ಕೆ ಕಳಂಕ ಬರುತ್ತದೆ.

ಹಿಂದೆ ಎಲ್ಲ ಜಾತಿಯ ಮಠಾಧೀಶರು, ದಾಸರು, ಶರಣರು, ಸಂತರು ಸಮಾನತೆಯನ್ನು ಪರಿಪಾಲಿಸುತ್ತಾ ಬಂದಿದ್ದರು. ಅಲ್ಲದೇ ಸಂಕುಚಿತ ಮನೋಭಾನೆಯಿಂದ ಬದುಕಿಲ್ಲ, ಬದುಕಲಿಲ್ಲ. ರಾಜ್ಯದಲ್ಲಿ ಧರ್ಮದ ಎಲ್ಲಾ ಜಾತಿಯ ಜನರ ಆಶೀರ್ವಾದ, ಸಹಕಾರ, ಬೆಂಬಲದಿಂದ, ಹಿಂದುತ್ವದ ಆಧಾರದ ಮೇಲೆ ಇಂದು ಬಿ.ಜೆ.ಪಿ.ಸರ್ಕಾರ ರಚನೆಯಾಗಿದೆ ಹೊರತು ಕೇವಲ ವೀರಶೈವ ಲಿಂಗಾಯತ ಮತದಿಂದಲ್ಲ ಎಂಬ ಅರಿವು ನಮಗಿರಬೇಕು. ದೇಶದ ಪ್ರಧಾನ ಮಂತ್ರಿಗಳು, ಕೇಂದ್ರದ ನಾಯಕರುಗಳು, ದೇಶದ ಅಥವಾ ರಾಜ್ಯದ ಹಿತದೃಷ್ಟಿಯಿಂದ ಪಕ್ಷಕ್ಕೆ ಮತ್ತು ರಾಜ್ಯಕ್ಕೆ ಒಳ್ಳೆಯದಾಗುವ ನಿಟ್ಟಿನಲ್ಲಿ ಸಮರ್ಥವಾದ, ಸೂಕ್ತವಾದ ನಿರ್ಣಯ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇರಬೇಕು. ಅವರ ಮೇಲೆ ನಂಬಿಕೆವಿಡದೇ, ವಿಶ್ವಾಸವಿಡದೇ, ಲಾಬಿ ಮಾಡಿ, ಒತ್ತಡ ತಂತ್ರ ರೂಪಿಸುವುದು, ಧರ್ಮಗುರುಗಳ ಕೆಲಸವಲ್ಲ. ಇದರಿಂದ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ.
ದೇಶದಲ್ಲಿ ಸ್ವಾಮೀಜಿಗಳ, ಸಂತರ, ಶರಣರ, ಸೇನಾನಿಗಳ, ಹಿಂದು ಕಾರ್ಯಕರ್ತರ ಹತ್ಯೆಯಾದಾಗ, ಮತಾಂಧರ ಹಾವಳಿ ಹೆಚ್ಚಾದಾಗ, ಮಠ- ದೇವಸ್ಥಾನಗಳಿಗೆ ಧಕ್ಕೆಯಾದಾಗ, ಸಮಸ್ತ ಹಿಂದುಗಳ ಪರವಾಗಿ ಹೋರಾಟಕ್ಕೆ ಇಳಿಯಬೇಕು ಹೊರತು ಈ ರೀತಿ ಒಬ್ಬ ವ್ಯಕ್ತಿಗಾಗಿ ಅಲ್ಲ. ಸಂಕುಚಿತ ಭಾವನೆಯಿಂದ ರಾಜ್ಯದಲ್ಲಿ ಕೆಲ ವೀರಶೈವ-ಲಿಂಗಾಯತ ಸ್ವಾಮಿಜಿಗಳಿಂದ ನಡೆಯುತ್ತಿರುವ ವ್ಯಕ್ತಿ ಕೇಂದ್ರಿಕೃತ ಹೋರಾಟ ಎಲ್ಲ ಜಾತಿಯ ಸ್ವಾಮೀಜಿಗಳನ್ನು ಹೊಡೆದೆಬ್ಬಿಸುವಂತಿದೆ. ಸಮಾಜಕ್ಕೆ ಕೆಟ್ಟ ಹೆಸರು ತರುವಂತಿದೆ. ಇದು ಹಿಂದು ಸಮಾಜವನ್ನು ಒಡೆಯುವಂತಿದೆ. ಆದ್ದರಿಂದ ಸಮಾಜದ ಸ್ವಾಮೀಜಿಗಳು ಎಲ್ಲವನ್ನು ಅರ್ಥೈಸಿಕೊಂಡು, ಉದಾತ್ತ ಮನಸ್ಸಿನಿಂದ ಸಮಾಜಕ್ಕೆ ಮುಜುಗರವಾಗದ ರೀತಿಯಲ್ಲಿ ವೀರಶೈವ- ಲಿಂಗಾಯತ ಸಮಾಜದ ಘನತೆಯನ್ನು ಎತ್ತಿ ಹಿಡಿದು, ನಾವೇನಿದ್ದರೂ ಹಿಂದುಗಳು ಎಂಬ ಭಾವನೆಯ ಜೊತೆಗೆ, ರಾಜಕೀಯ ಮತ್ತು ಧರ್ಮದ ಅರಿವಿನೊಂದಿಗೆ ರಾಜ್ಯದ ಹಿತಕ್ಕೆ ಬಧ್ಧರಾಗಿ ಬದುಕೋಣ