ಬೆಂಗಳೂರು: ಮೂರು ವರ್ಷದ ಮಗು ಆಟವಾಡುತ್ತಾ ಪುಟ್ಟ ಗಣೇಶ ಮೂರ್ತಿಯನ್ನು ನುಂಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಗು ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಾಗ ಪೋಷಕರು ಶುಕ್ರವಾರ ರಾತ್ರಿ ಕಂದಮ್ಮನನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ವೈದ್ಯರು ಎಕ್ಸ್ ರೇ ತೆಗೆದಾಗ ಗಣೇಶ ಮೂರ್ತಿ ಇರೋದು ಕಂಡಿದೆ. ಕೂಡಲೇ ಎಚ್ಚೆತ್ತ ವೈದ್ಯ ಶ್ರೀಕಾಂತ್, ಎಂಡೋಸ್ಕೋಪಿ ಮೂಲಕ ಮಗುವಿನ ದೇಹದಲ್ಲಿದ್ದ ಮೂರ್ತಿಯನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೂರ್ತಿ ಹೊರ ತೆಗೆದಿದ್ದು ರೋಚಕ:
ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆತಂದಾಗ ವೈದ್ಯರು ಕಂದನ ಆರೋಗ್ಯ ಗಮನಿಸಿದ್ದಾರೆ. ಎಕ್ಸ್ ರೇ ಮಾಡಿದಾಗ ಗಣೇಶ ಮೂರ್ತಿ ಕಂಡು ಬಂದಿದೆ. ಆದ್ರೆ ಗಣೇಶನ ಮೂರ್ತಿ ಮಗುವಿನ ಅನ್ನನಾಳದ ಬಳಿಯಲ್ಲಿ ಸಿಲುಕಿಕೊಂಡಿತ್ತು. ಎಂಡೋಸ್ಕೋಪಿ ಮೂಲಕ ಮೂರ್ತಿ ತೆಗೆಯಲು ಹೋದ್ರೆ ಅನ್ನನಾಳಕ್ಕೆ ಅಪಾಯ ಆಗುವ ಸಾಧ್ಯತೆ ಇತ್ತು. ಆದ್ದರಿಂದ ವೈದ್ಯರು ಅನ್ನನಾಳದಲ್ಲಿ ಸಿಲುಕಿದ್ದ ಮೂರ್ತಿಯನ್ನು ನಿಧಾನವಾಗಿ ಹೊಟ್ಟೆ ಭಾಗಕ್ಕೆ ತಂದಿದ್ದಾರೆ. ನಂತರ ಎಂಡೋಸ್ಕೋಪಿ ಮೂಲಕ ಮೂರ್ತಿಯನ್ನು ಹೊರ ತೆಗೆದಿದ್ದಾರೆ.
ಮೂರ್ತಿ ಹೊರ ತೆಗೆದ ಬಳಿಕ ಮಗುವನ್ನು ಎರಡು ಗಂಟೆ ಆಸ್ಪತ್ರೆಯಲ್ಲಿ ಇರಿಸಿಕೊಳ್ಳಲಾಗಿತ್ತು. ನಂತರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದ ಹಿನ್ನೆಲೆ ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದೆ.