ಮಂಗಳೂರು: ಬಿಜೆಪಿಯವರಿಗೆ ದಲಿತರ ಬಗ್ಗೆ ಕಾಳಜಿ ಇದ್ದರೆ ಬಿ.ಎಸ್‌ಯಡಿಯೂರಪ್ಪನವರು ರಾಜಿನಾಮೆ ನೀಡಿದ ಬಳಿಕ ದಲಿತರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಸವಾಲು ಹಾಕಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ದಲಿತರನ್ನು ಸಿಎಂ ಮಾಡುವ ಅವಕಾಶ ಈಗ ಬಿಜೆಪಿಗೆ ಬಂದಿದೆ. ಸಿದ್ದರಾಮಯ್ಯ ದಲಿತರನ್ನ ಸಿಎಂ ಮಾಡಲಿ ಅಂತ ಕಟೀಲ್ ಅವರು ನನಗೆ ಹೇಳಿದ್ದರು.
ನಮ್ಮಲ್ಲಿ ದಲಿತರು ಸಿಎಂ ಆಗಿದ್ದಾರೆ. ಹೀಗಾಗಿ ಸದ್ಯ ಅವರಿಗೆ ಆ ಅವಕಾಶವಿದೆ, ಕಟೀಲ್ ದಲಿತರನ್ನ ಸಿಎಂ ಮಾಡಲಿ ಎಂದು ಕುಟುಕಿದ್ದಾರೆ.
ಯಡಿಯೂರಪ್ಪರನ್ನ ಹೇಗಿದ್ದರೂ ತೆಗೀತಾರೆ, ಈಗ ದಲಿತರನ್ನ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಲಿ. ಸಾಮಾಜಿಕ ನ್ಯಾಯ ಇದೆ ಅಂತ ಹೇಳ್ತಾರೆ, ದಲಿತರ ಬಗ್ಗೆ ಕಟೀಲ್‌ಗೆ ಪ್ರೀತಿ ಇದೆ ಅಲ್ವಾ, ಹಾಗಾದ್ರೆ ಸಿಎಂ ಮಾಡಲಿ. ಜನರ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ, ಹಿಂದೆಯೂ ಇರಲಿಲ್ಲ, ಈಗ ಬರೋಕೂ ಸಾಧ್ಯವಿಲ್ಲ ಎಂದಿದ್ದಾರೆ.