ಹಾಸನ(ಜು.೨೨): ಸಕಲೇಶಪುರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಾಲ್ ಬಳಿ ಭೂ ಕುಸಿತ ಉಂಟಾಗಿದೆ. ಹೀಗಾಗಿ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಮಂಗಳೂರಿಗೆ ತೆರಳುವ ಪ್ರಯಾಣಿಕರು ಚಾರ್ಮಾಡಿ ಘಾಟ್ ಮೂಲಕ ತೆರಳುವಂತೆ ಸೂಚನೆ ನೀಡಲಾಗಿದೆ.

ಧರ್ಮಸ್ಥಳ, ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಭೂಕುಸಿತವಾದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ದುರಸ್ತಿ ಉದ್ದೇಶಗಳಿಂದ ರಸ್ತೆ ಮಾರ್ಗವನ್ನು 4 ದಿನಗಳ ಕಾಲ ಬಂದ್ ಮಾಡಲಾಗಿದ್ದು, ಪ್ರಯಾಣಿಕರು ಬದಲಿ ಮಾರ್ಗದಲ್ಲಿ ತೆರಳುವಂತೆ ಕೋರಲಾಗಿದೆ.
