ಬೆಂಗಳೂರು: ಮೊದಲ ಬಾರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ. ದೆಹಲಿ ಪ್ರವಾಸದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮುಖ್ಯಮಂತ್ರಿಗಳು ಮಾತನಾಡಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ನನ್ನ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ. 75 ವರ್ಷ ಆದ್ರೂ ನನಗೆ ಎಲ್ಲ ಹುದ್ದೆ ಮತ್ತು ಅವಕಾಶಗಳನ್ನು ನೀಡಿದ್ದಾರೆ. ಜುಲೈ 25ಕ್ಕೆ ಹೈಕಮಾಂಡ್ ನಿಂದ ಬರುವ ಸಂದೇಶಕ್ಕೆ ಕಾಯುತ್ತಿದ್ದೇನೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ ಎಂದು ಹೇಳುವ ಮೂಲಕ ರಾಜೀನಾಮೆಯ ಸುಳಿವು ನೀಡಿದರು.
ಕಳೆದ ಕೆಲ ದಿನಗಳಿಂದ ಎಲ್ಲ ಸಮಾಜದ ಸ್ವಾಮೀಜಿಗಳು ಬಂದು ಭೇಟಿಯಾಗಿದ್ದಾರೆ. ಇವರೆಲ್ಲರ ಪ್ರೀತಿ ಎಂದಿಗೂ ಮರೆಯಲ್ಲ. ನನ್ನ ಪರವಾಗಿ ಹೇಳಿಕೆ ಮತ್ತು ಪ್ರತಿಭಟನೆ ನಡೆಸೋದು ತಪ್ಪು. ಜುಲೈ 26ರಂದು ಬಿಜೆಪಿ ಸರ್ಕಾರ ರಚನೆಯಾಗಿ ಎರಡು ವರ್ಷದ ಸಂಭ್ರಮದಲ್ಲಿ ವಿಶೇಷ ಕಾರ್ಯಕ್ರಮ ಇರಲಿದೆ ಎಂದರು.