ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಮುನ್ನಲೆಗೆ ಬರುತ್ತಿದ್ದಂತೆ ಇಂದು ರಾಜ್ಯದ ಹಲವು ಮಠಾಧೀಶರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾದರು. ಬಾಳೆ ಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಭೇಟಿಯಾದ ಸುಮಾರು 25 ಸ್ವಾಮೀಜಿಗಳು ಒಂದು ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದರು.
ಭೇಟಿ ವೇಳೆ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದ್ದು ಮುಂದಿನ ಚುನಾವಣೆವರೆಗೂ ಮುಂದುವರಿಯುವಂತೆ ಮಠಾಧೀಶರು ಮನವಿ ಮಾಡಿದ್ದಾರೆ. ಆದರೆ ಈ ಮನವಿಯನ್ನು ನಿರಾಕರಿಸಿರುವ ಬಿಎಸ್‌ವೈ, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮಹತ್ವದ ಬೆಳವಣಿಗೆ ನಡೆಯಲಿದ್ದು, ಹೈಕಮಾಂಡ್ ತಿರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಭೇಟಿ ಬಳಿಕ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ,ಯಡಿಯೂರಪ್ಪ ಬದಲಾವಣೆ ಮಾಡೋ ಅಗತ್ಯ ಈಗ ಏನಿದೆ? ಯಡಿಯೂರಪ್ಪ ಬದಲಾವಣೆ ಮಾಡಿದ್ರೆ ಬಿಜೆಪಿ ಸರ್ವನಾಶ ಆಗುತ್ತೆ, ಹೈಕಮಾಂಡ್ ಯಡಿಯೂರಪ್ಪ ಬೆನ್ನಿಗೆ ನಿಲ್ಲಬೇಕು ಅವರಿಗೆ ಆಡಳಿತ ನಡೆಸಲು ಅವಕಾಶ ಕೊಡಬೇಕು ಎಂದರು.