ಯುಸ್‌ನ ಟೆಕ್ಸಾಸ್‌ನಲ್ಲಿ ಮಂಕಿಪಾಕ್ಸ್ ಎಂಬ ಅಪರೂಪದ ಕಾಯಿಲೆಯ ಮೊದಲ ಪ್ರಕರಣ ವರದಿಯಾಗಿದೆ. ಇದನ್ನು ಯುಎಸ್ ಆರೋಗ್ಯ ಸಂಸ್ಥೆ ಸಿಡಿಸಿ ದೃಢ ಪಡಿಸಿದೆ. ರೋಗ ಪತ್ತೆಯಾದ ರೋಗಿಯು ನೈಜೀರಿಯಾದಿಂದ ಪ್ರಯಾಣಿಸಿದ್ದ ಎಂದು ತಿಳಿದು ಬಂದಿದೆ. ಮನೆಗೆ ವಾಪಾಸ್ ಮರಳುವಾಗ ಅಟ್ಲಾಂಟಾ ಮತ್ತು ಜಾರ್ಜಿಯಾದಲ್ಲಿ ತಂಗಿರುವ ಮಾಹಿತಿ ಲಭ್ಯವಾಗಿದೆ. ಪ್ರಯಾಣದ ಸಮಯದಲ್ಲಿ ರೋಗಿಯೊಂದಿಗೆ ಯಾರು ಸಂಪರ್ಕಕ್ಕೆ ಬಂದಿದ್ದಾರೆ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ. ಇದಕ್ಕೂ ಮುನ್ನ ಬ್ರಿಟನ್‌ನಲ್ಲಿ ಜೂನ್ ತಿಂಗಳಿನಲ್ಲಿ ಮಂಕಿಪಾಕ್ಸ್‌ನ ಎರಡು ಪ್ರಕರಣಗಳು ವರದಿಯಾಗಿದ್ದವು.
ಟೆಕ್ಸಾಸ್‌ನಲ್ಲಿ ಮಂಕಿಪಾಕ್ಸ್ ವೈರಸ್‌ನ ಮೊದಲ ಪ್ರಕರಣ ಇದಾಗಿದೆ. ಆರೋಗ್ಯ ಅಧಿಕಾರಿಗಳ ಪ್ರಕಾರ, ಸೋಂಕಿತ ವ್ಯಕ್ತಿಯು ಜುಲೈ 9ರಂದು ಟೆಕ್ಸಾಸ್‌ನ ಡಲ್ಲಾಸ್ ಲವ್ ಫೀಲ್ಡ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅವರನ್ನು ಹತ್ತಿರದ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಿ, ಚಿಕಿತ್ಸೆ ನೀಡಲಾಗಿದೆ. ಈಗ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ಸಿಡಬುಗೆ ಹೋಲುವ ಅಪರೂಪದ ಖಾಯಿಲೆ ಮಂಕಿಪಾಕ್ಸ್
ಸಿಡುಬುಗೆ ಹೋಲುವ ಅಪರೂಪದ ಕಾಯಿಲೆಯೆಂದರೆ ಮಂಕಿಪಾಕ್ಸ್. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ, ಮಂಕಿಪಾಕ್ಸ್ ಒಂದು ಜುನೋಟಿಕ್ ವೈರಲ್ ಕಾಯಿಲೆಯಾಗಿದೆ. ಅಂದರೆ, ಈ ವೈರಸ್ ಸೋಂಕಿತ ಪ್ರಾಣಿಗಳಿಂದ ಮನುಷ್ಯರನ್ನು ತಲುಪುತ್ತದೆ. ಇದರ ಹೆಚ್ಚಿನ ಪ್ರಕರಣಗಳು ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಮಳೆಕಾಡುಗಳಲ್ಲಿ ಕಂಡುಬರುತ್ತವೆ. ಸೋಂಕಿತ ಪ್ರಾಣಿಯ ರಕ್ತ, ಬೆವರು ಅಥವಾ ಲಾಲಾರಸದ ಸಂಪರ್ಕದಿಂದ ಮಂಕಿಪಾಕ್ಸ್ ವೈರಸ್ ಮನುಷ್ಯರಿಗೆ ಹರಡುತ್ತದೆ. ತಜ್ಞರ ಪ್ರಕಾರ, ಮಂಕಿಪಾಕ್ಸ್ ವೈರಸ್ ಸಿಡುಬು ಗುಂಪಿಗೆ ಸೇರಿದೆ.
ಈ ರೋಗಲಕ್ಷಣಗಳನ್ನು ಕಂಡು ಬಂದರೆ ಜಾಗರೂಕರಾಗಿರಿ
ಮಂಕಿಪಾಕ್ಸ್‌ನ ಲಕ್ಷಣಗಳು ಸಿಡುಬು ರೋಗದಂತೆಯೇ ಇರುತ್ತವೆ. ಚರ್ಮ, ಜ್ವರ, ತಲೆನೋವು, ಬೆನ್ನು ನೋವು, ಸ್ನಾಯು ನೋವು ಮತ್ತು ಮೈ ಮೇಲೆ ಗುಳ್ಳೆಗಳು ಮತ್ತು ದದ್ದುಗ ಕಾಣಿಸಿಕೊಂಡರೆ ಮಂಕಿಪಾಕ್ಸ್ ವೈರಸ್ ಸೋಂಕಿನ ಲಕ್ಷಣಗಳಾಗಿವೆ.
ಮಂಕಿಪಾಕ್ಸ್ ಹೇಗೆ ಹರಡುತ್ತದೆ?
ಯುಕೆ ಆರೋಗ್ಯ ಸಂಸ್ಥೆ ಎನ್‌ಎಚ್‌ಎಸ್ ಪ್ರಕಾರ, ಸೋಂಕಿತ ವ್ಯಕ್ತಿಯ ಸಂಪರ್ಕದ ನಂತರ 1 ರಿಂದ 5 ದಿನಗಳ ನಂತರ ಚರ್ಮದ ದದ್ದುಗಳು ಕಾಣಿಸಿಕೊಳ್ಳುತ್ತವೆ. ಇದು ಅದರ ಆರಂಭಿಕ ಲಕ್ಷಣವಾಗಿದೆ. ಈ ದದ್ದುಗಳು ಮುಖದಿಂದ ಪ್ರಾರಂಭವಾಗುತ್ತವೆ, ಕ್ರಮೇಣ ಅವು ದೇಹದ ಇತರ ಭಾಗಗಳಿಗೆ ಹರಡುತ್ತವೆ. ಈ ದದ್ದುಗಳು ಕ್ರಮೇಣ ಗುಳ್ಳೆಗಳಾಗಿ ಬದಲಾಗಿ, ಅವುಗಳಲ್ಲಿ ದ್ರವ ತುಂಬುತ್ತದೆ.

ಶೇಕಡಾ 11 ಸಾವಿನ ಅಪಾಯ
ಡಬ್ಲ್ಯುಎಚ್‌ಒ ಪ್ರಕಾರ, ಮಂಕಿಪಾಕ್ಸ್ ಖಾಯಿಲೆಯಲ್ಲಿ ಸಾವಿನ ಅಪಾಯವು ಶೇಕಡಾ 11 ರಷ್ಟಿದೆ. ಸಿಡುಬು ರೋಗದಿಂದ ರಕ್ಷಿಸಲು ‘ವ್ಯಾಕ್ಸಿನ್ ಇಮ್ಯುನ್ ಗ್ಲೋಬ್ಯುಲಿನ್’ ಎಂಬ ಲಸಿಕೆಯನ್ನು ಬಳಸಲಾಗುತ್ತದೆ. ಒಂದೇ ಗುಂಪಿನ ವೈರಸ್ ಆಗಿರುವುದರಿಂದ, ಮಂಕಿಪಾಕ್ಸ್ ಸೋಂಕಿನಿಂದ ಬಳಲುತ್ತಿರುವ ರೋಗಿಗೆ ಅದೇ ಲಸಿಕೆಯನ್ನು ನೀಡಲಾಗುತ್ತೆ.
ಮೊದಲ ಪ್ರಕರಣ 1970 ರಲ್ಲಿ ವರದಿ
ಈ ವೈರಸ್ ಅನ್ನು 1958 ರಲ್ಲಿ ಏಡಿ ತಿನ್ನುವ ಮಕಾಕ್ ಕೋತಿಗಳಲ್ಲಿ ಕಂಡುಹಿಡಿಯಲಾಯಿತು. ಇದರ ಮೊದಲ ಪ್ರಕರಣ 1970 ರಲ್ಲಿ ಕಾಂಗೋ ವರದಿಯಾಗಿತ್ತು. ಅದಾದ ನಂತರ ಇದು ಕ್ರಮೇಣ ವಿಶ್ವದ ಹಲವು ದೇಶಗಳಿಗೆ ಹರಡಿತು. ಇದರ ಪ್ರಕರಣಗಳು ಯುಎಸ್ನಲ್ಲಿ ಮೊದಲು 2003ರಲ್ಲಿ ವರದಿಯಾಗಿತ್ತು. ಈ ವೈರಸ್ ಗಾಳಿಯಲ್ಲಿರುವ ಹನಿಗಳ ಮೂಲಕ ಹರಡುತ್ತದೆ.