ಪುಲಿಟ್ಜೆರ್ ಪ್ರಶಸ್ತಿ ವಿಜೇತ ಪತ್ರಕರ್ತ ದಾನಿಶ್ ಸಿದ್ದೀಕಿ ಉಗ್ರರ ಘರ್ಷಣೆಯಲ್ಲಿ ಬಲಿಯಾಗಿದ್ದಾರೆ. ರಾಯಿಟರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿದ್ದೀಕಿ ಅಫ್ಘಾನ್ ವಿಶೇಷ ಪಡೆಯೊಂದಿಗೆ ವರದಿಗಾಗಿ ತೆರಳಿದ್ದರು. ಈ ವೇಳೆ ಕಂದಹಾರ್‌ನ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ತಾಲಿಬಾನ್ ಉಗ್ರರು ಮತ್ತು ಅಫ್ಘಾನ್ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ. ಸಿದ್ದೀಕಿ ಅವರ ಸಾವು ಹೇಗೆ ಸಂಭವಿಸಿದೆ ಎನ್ನುವುದರ ಬಗ್ಗೆ ಇನ್ನು ಖಚಿತ ಮಾಹಿತಿ ದೊರಕಿಲ್ಲ.

ದಾನಿಶ್ ಕಳೆದ ಹಲವು ದಿನಗಳಿಂದ ಕಂದಹಾರ್‌ನ ಪರಿಸ್ಥಿತಿ ಕುರಿತು ವರದಿ ಮಾಡುತ್ತಿದ್ದರು. ಪಾಕಿಸ್ತಾನ ಮತ್ತು ಅಫ್ಘಾನ್‌ನ ಪ್ರಮುಖ ಗಡಿಯಾಗಿರುವ ‘ಸ್ಪಿನ್ ಬೋಲ್ಡಾಕ್’ನ ಬಾರ್ಡರ್ ಕ್ರಾಸಿಂಗ್ ಅನ್ನು ತಾಲಿಬಾನ್ ವಶಪಡಿಸಿಕೊಂಡಿತ್ತು. ಈ ಪ್ರಮುಖ ಗಡಿಯನ್ನು ಹಿಂಪಡೆಯಲು ಕಾರ್ಯಾಚರಣೆ ಪ್ರಾರಂಭಿಸಿದ್ದ ಅಫ್ಘಾನ್ ಪಡೆಗಳು ಸ್ಪಿನ್ ಬೋಲ್ಡಾಕ್‌ನಲ್ಲಿ ತಾಲಿಬಾನ್ ಬಂಡುಕೋರರೊಂದಿಗೆ ಘರ್ಷಣೆ ನಡೆಸಿದ್ದವು. ಜುಲೈ 13 ರಂದು, ದಾನಿಶ್ ಮತ್ತು ಇತರ ವಿಶೇಷ ಪಡೆಗಳು ಪ್ರಯಾಣಿಸುತ್ತಿದ್ದ ವಾಹನವನ್ನು ಗುರಿಯಾಗಿಸಿ ಕನಿಷ್ಠ ಮೂರು ಸುತ್ತಿನ ಗುಂಡಿನ ಚಕಮಕಿ ನಡೆದಿದ್ದವು ಎಂದು ಅವರು ವಿಡಿಯೊ ಸಮೇತ ವರದಿ ಮಾಡಿದ್ದರು. ಈ ಕುರಿತು ದಾನಿಶ್ ಮಾಡಿರುವ ಟ್ವೀಟ್‌ನಲ್ಲಿಯು ಉಲ್ಲೇಖಿಸಿದ್ದರು.

ಎರಡು ದಿನಗಳ ಹಿಂದೆ ಮಗನನ್ನು ಕೊನೆಯದಾಗಿ ಮಾತನಾಡಿದ್ದಾಗಿ ದಾನಿಶ್ ಸಿದ್ದೀಕಿ ಅವರ ತಂದೆ ಪ್ರೊಫೆಸರ್ ಅಖ್ತರ್ ಸಿದ್ದಿಕಿ ತಿಳಿಸಿದ್ದಾರೆ. ಅವನು ತನ್ನ ವೃತ್ತಿಯ ಮುಂದೆ ಯಾರ ಮಾತನ್ನೂ ಕೇಳಲಿಲ್ಲ. ದಾನಿಶ್ ಸವಾಲುಗಳನ್ನು ಸ್ವಿಕರಿಸಿ ವರದಿ ಮಾಡುತ್ತಿದ್ದರು. ದಾನಿಶ್ ಅವರ ಉತ್ಸಾಹವನ್ನು ನೋಡಿದ ನಾವು ಅವರನ್ನು ಅಫ್ಘಾನಿಸ್ತಾನಕ್ಕೆ ಹೋಗುವುದನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಭಾವುಕರಾಗಿ ನುಡಿದಿದ್ದಾರೆ.
The Humvee in which I was travelling with other special forces was also targeted by at least 3 RPG rounds and other weapons. I was lucky to be safe and capture the visual of one of the rockets hitting the armour plate overhead. pic.twitter.com/wipJmmtupp
— Danish Siddiqui (@dansiddiqui) July 13, 2021
2018 ರಲ್ಲಿ ತನ್ನ ‘ಫೀಚರ್ ಫೋಟೋಗ್ರಾಫಿ’ ಸರಣಿಗಾಗಿ ಪ್ರತಿಷ್ಠಿತ ಪುಲಿಟ್ಜೆರ್ ಪ್ರಶಸ್ತಿಯನ್ನು ಅವರು ಪಡೆದಿದ್ದರು. ಆ ವರ್ಷ ರಾಯ್ಟರ್ಸ್‌ನ ಒಟ್ಟು ಏಳು ಪತ್ರಕರ್ತರಿಗೆ ಪ್ರಶಸ್ತಿ ಬಂದಿದ್ದು, ಅದರಲ್ಲಿನ ಇಬ್ಬರು ಭಾರತೀಯರಲ್ಲಿ ದಾನಿಶ್ ಸಿದ್ದೀಕಿ ಒಬ್ಬರಾಗಿದ್ದಾರೆ. ಅಂದಿನ ಅವರ ಫೋಟೊ ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟನ್ನು ದಾಖಲಿಸಿತ್ತು.