ಬೆಂಗಳೂರು : ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಮತ್ತು ಅವರ ಆಪ್ತರಿಂದ ದಲಿತ ವೇಟರ್ ಮೇಲೆ ಹಲ್ಲೆಯಾಗಿದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ ಮಾಡಿದ್ದಾರೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ಎರಡು ಪುಟಗಳ ಮನವಿ ಪತ್ರ ನೀಡಿರುವ ಇಂದ್ರಜಿತ್ ಲಂಕೇಶ್, ದರ್ಶನ್ ಮತ್ತು ಆಪ್ತರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಇತ್ತಿಚೆಗೆ ಬೆಳಕಿಗೆ ಬಂದ ಬ್ಯಾಂಕ್ ವಂಚನೆ ಪ್ರಕರಣಕ್ಕೂ ನಾಲ್ಕೈದು ದಿನಗಳ ಮುನ್ನ ಈ ಘಟನೆ ನಡೆದಿದೆ. ಮೈಸೂರಿನಲ್ಲಿರುವ ಸಂದೇಶ್ ಪಿನ್ಸ್ ಹೋಟೆಲ್ ನಲ್ಲಿ ಈ ಘಟನೆ ನಡೆದಿದ್ದು, ಅಲ್ಲಿರುವ ದಲಿತ ಸಮುದಾಯದ ವೇಟರ್ ಮೇಲೆ ಗಂಭೀರ ಹಲ್ಲೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಹಲ್ಲೆಯಿಂದ ವೇಟರ್ ಗೆ ಕಣ್ಣುಗಳಿಗೆ ಹಾನಿಯಾಗಿದೆ. ಸಿಸಿ ಟಿವಿ ದೃಶ್ಯ ಇದೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಎಂದು ಇಂದ್ರಜಿತ್ ಆಗ್ರಹಿಸಿದ್ದಾರೆ. ಆದರೆ ನಟನ ಹೆಸರನ್ನ ಮನವಿಯಲ್ಲಿ ಉಲ್ಲೇಖಿಸದ ಇಂದ್ರಜಿತ್ ಲಂಕೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ಹೆಸರು ಬಹಿರಂಗಪಡಿಸಿದ್ದಾರೆ. ನಾನು ಸಾಮಾನ್ಯರ ಪರ. ಪ್ರತಿಯೊಂದು ಕೇಸ್ ನಲ್ಲಿ ಸಾಮಾನ್ಯರಿಗೆ ನ್ಯಾಯ ಸಿಗ್ತಿಲ್ಲ. ಹೀಗಾಗಿ ಈ ಪ್ರಕರಣದಲ್ಲಾದರೂ ನ್ಯಾಯ ಸಿಗಲಿ ಎಂದು ಇಂದ್ರಜಿತ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ತನಿಖೆಗೆ ಗೃಹ ಸಚಿವರು ಮೈಸೂರು ಪೊಲೀಸರಿಗೆ ಸೂಚಿಸಬೇಕು. ಈ ಬಗ್ಗೆ ತನಿಖೆಯಾಗಬೇಕು. ತನಿಖೆಯಾಗದಿದ್ದರೇ ತಮ್ಮ ಬಳಿ ಇರುವ ಸಿಸಿಟಿವಿ ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಅವರು ಹೇಳಿದ್ದಾರೆ. ಪಾಪಾಣ್ಣ ಎನ್ನುವ ಹೆಸರಿನ ವ್ಯಕ್ತಿಯ ಮೂಲಕ ಸಂಧಾನ ಮಾಡಿಸಲಾಗುತ್ತಿದೆ. ಎಲ್ಲವೂ ಸಂಧಾನದಲ್ಲಿ ಬಗೆಹರಿಬಾರದು. ತಪ್ಪಿಸ್ಥರ ವಿರುದ್ಧ ಕ್ರಮ ಆಗಬೇಕಿದ್ದು ಪೊಲೀಸರು ತನಿಖೆ ಮಾಡಬೇಕು ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.