ಬೆಂಗಳೂರು: ಬೆಳಗಾವಿಯಲ್ಲಿ ಕೂಡಲೇ ವಿಧಾನ ಮಂಡಲ ಅಧಿವೇಶನ ಕರೆಯುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ವಿಧಾನಮಂಡಲದ ಸರ್ಕಾರಿ ಕಾರ್ಯಕಲಾಪಗಳ ನಿರ್ವಹಣೆ ಅಧಿನಿಯಮ ೨೦೦೫’ ರ ಸೆಕ್ಷನ್ ೩ ಮತ್ತು ೪ ರಂತೆ ಜುಲೈ ತಿಂಗಳಲ್ಲಿ ವಿಧಾನಸಭೆಯ ಅಧಿವೇಶನ ನಡೆಸಬೇಕಾಗಿತ್ತು. ಆದರೆ ಸರ್ಕಾರವು ಇದುವರೆಗೂ ಕೂಡ ಅಧಿವೇಶನ ನಡೆಸಲು ಯಾವುದೆ ಕ್ರಮಗಳನ್ನು ಕೈಗೊಳ್ಳದಿರುವುದು ನಿಯಮಬಾಹಿರ ಕ್ರಮವಾಗಿದೆ.
ರಾಜ್ಯದ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮುಖ್ಯವಾಗಿ ರಾಜ್ಯದ ಆರ್ಥಿಕ, ರಾಜಕೀಯ, ಆಡಳಿತಾತ್ಮಕ ಮತ್ತು ಆರೋಗ್ಯ ಕ್ಷೇತ್ರಗಳ ಆರೋಗ್ಯವು ಕುಸಿದು ಬಿದ್ದಿದೆ. ಕೋವಿಡ್ ಎರಡನೇ ಅಲೆಯನ್ನು ರಾಜ್ಯ ಸರ್ಕಾರ ನಿಭಾಯಿಸಿದ ರೀತಿ ಅತ್ಯಂತ ಅರಾಜಕವಾಗಿತ್ತು ಮತ್ತು ಜನರ ಪಾಲಿಗೆ ಮಾರಣಾಂತಿಕವಾಗಿತ್ತು. ಈಗಾಗಲೆ ಮತ್ತೆ ೩ನೇ ಅಲೆಯ ಭೀತಿ ಜನರನ್ನು ಕಾಡುತ್ತಿದೆ. ಜನರಿಗೆ ಸಮರ್ಪಕವಾಗಿ ವ್ಯಾಕ್ಸಿನ್ ಸಿಕ್ಕುತ್ತಿಲ್ಲ. ಕೊರೋನಾದ ೩ನೇ ಅಲೆಯನ್ನು ನಿಭಾಯಿಸಲು ಸರ್ಕಾರ ಯಾವ ರೀತಿಯ ತಯಾರಿಯನ್ನು ಮಾಡಿಕೊಂಡಿದೆ ಎಂಬ ಕುರಿತು ಮಾಹಿತಿ ಇಲ್ಲ. ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಬೇಕಾದ ನ್ಯಾಯಯುತವಾದ ಹಣವನ್ನು ನೀಡದೆ ವಂಚಿಸುತ್ತಿದೆ, ಆದರೂ ರಾಜ್ಯ ಸರ್ಕಾರವು ಕಮಕ್ ಕಿಮಕ್ ಎನ್ನದೆ ಕುಳಿತಿದೆ. ಇದರ ನಡುವೆ ರಾಜ್ಯ ಸರ್ಕಾರವು ಭೀಕರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬ ಗಂಭೀರ ಆರೋಪಗಳನ್ನು ಎದುರಿಸುತ್ತಿದೆ.
ರಾಜ್ಯವನ್ನು ಮತ್ತೆ ಪ್ರವಾಹದ ಭೀತಿ ಕಾಡುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಪ್ರವಾಹದಿಂದ ಸಂಭವಿಸಿದ ಹಾನಿಗೆ ಸರ್ಕಾರದ ಸಮರ್ಪಕ ಪರಿಹಾರವನ್ನು ನೀಡಿಲ್ಲ. ಕೃಷಿ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಶಿಕ್ಷಣ ವ್ಯವಸ್ಥೆಯೂ ಅಧೋಗತಿಗಿಳಿದಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ದಲಿತ, ದಮನಿತ ಹೆಣ್ಣು ಮಕ್ಕಳ ಮೇಲೆ ಘೋರವಾದ ಅತ್ಯಾಚಾರ ಪ್ರಕರಣಗಳು, ಮರ್ಯಾದಾ ಹತ್ಯೆಗಳು ನಡೆಯುತ್ತಿವೆ, ಜನರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಕೃಷಿ ಕ್ಷೇತ್ರದ ಕುರಿತ ಸರ್ಕಾರದ ನಿರ್ಲಕ್ಷ್ಯ ಹೆಚ್ಚುತ್ತಿದೆ, ಮತ್ತೆ ಅಕ್ರಮ ಗಣಿಗಾರಿಕೆ ದಂಧೆ ಹೆಚ್ಚಾಗುತ್ತಿದೆ. ಒಟ್ಟಾರೆ ರಾಜ್ಯದ ಆಡಳಿತವು ಅಂಧಕಾರದಲ್ಲಿ ಮುಳುಗಿದೆ.
ರಾಜ್ಯದ ಜನರು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ಚರ್ಚಿಸಿ ಅವುಗಳಿಗೆ ಸಮರ್ಪಕ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನಿಯಮಗಳ ಪ್ರಕಾರ ಪ್ರತಿ ವರ್ಷ ಕನಿಷ್ಠ ೬೦ ದಿನಗಳ ಕಾಲ ಅಧಿವೇಶನ ನಡೆಸಬೇಕು, ವರ್ಷದಲ್ಲಿ ಕನಿಷ್ಟ ೪ ಅಧಿವೇಶನಗಳನ್ನು ನಡೆಸಬೇಕು. ಜನವರಿಯಲ್ಲಿ ೧೫, ಮಾರ್ಚ್ನಲ್ಲಿ ೨೦, ಜುಲೈನಲ್ಲಿ ೧೫, ಮತ್ತು ನವೆಂಬರ್‌ನಲ್ಲಿ ೧೦ ದಿನಗಳ ಕಾಲ ಅಧಿವೇಶನ ನಡೆಸಬೇಕು. ಆದರೆ ಬಿಜೆಪಿ ಆಡಳಿತದ ಸರ್ಕಾರವು ಈ ನಿಯಮಗಳನ್ನೆಲ್ಲ ಗಾಳಿಗೆ ತೂರುತ್ತಿದೆ. ೨೦೨೦ ರಲ್ಲಿ ಒಟ್ಟಾರೆ ೩೧ ದಿನಗಳ ಕಾಲ ಮತ್ತು ೨೦೨೧ ರಲ್ಲಿ ಇದುವರೆಗೆ ೨೦ ದಿನಗಳ ಕಾಲ ಮಾತ್ರ ಅಧಿವೇಶನ ನಡೆಸಿದೆ. ಈ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಬೆಳಗಾವಿಯಲ್ಲಿ ಇದುವರೆಗೆ ಒಂದು ಅಧಿವೇಶನವನ್ನೂ ನಡೆಸಿಲ್ಲ. ಸರ್ಕಾರದ ನಿಯಮ ಬಾಹಿರವಾದ ಈ ಕ್ರಮವು ಅಕ್ಷಮ್ಯವಾಗುತ್ತದೆ. ಆದ್ದರಿಂದ ಕೂಡಲೇ ಅಧಿವೇಶನ ನಡೆಸಲು ಅಧಿಸೂಚನೆ ಹೊರಡಿಸಲು ಸೂಕ್ತ ಕ್ರಮ ಕೈಗೊಳ್ಳಬೆಕೆಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.