ಮಂಗಳೂರು: ಉಳ್ಳಾಲದ ಮುಸ್ಲಿಂ ಕುಟುಂಬವೊಂದು ಹಿಂದೂ ಯುವತಿಯ ಮದುವೆ ಮಾಡುವ ಮೂಲಕ ಕೋಮು ಸೌಹಾರ್ದಯತೆಗೆ ಸಾಕ್ಷಿಯಾಗಿದೆ. ಭಾನುವಾರ ಈ ಮದುವೆ ನಡೆದಿದ್ದು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಮಂಗಳೂರಿನ ಶಕ್ತಿನಗರದವರಾದ ಕವನ ಅವರ ಕುಟುಂಬ ಆರ್ಥಿಕವಾಗಿ ಅಶಕ್ತವಾದ ಕುಟುಂಬ. ವಿಧವೆ ತಾಯಿ ಗೀತಾರೊಂದಿಗೆ ಉಳ್ಳಾಲ ಮಂಚಿಲದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಅವಿವಾಹಿತೆ ಕವನ ಮದ್ವೆ ನಿಶ್ಚಯವಾಗಿತ್ತು. ಜುಲೈ 11 ಮದುವೆಗೆ ದಿನ ನಿಗದಿಯಾಗಿತ್ತು. ಆದರೆ ಇವರಲ್ಲಿ ಆರ್ಥಿಕ ಸಂಪನ್ಮೂಲ ಏನೂ ಇಲ್ಲದ ಕಾರಣ ಅಕ್ಷರಶಃ ಮದುವೆ ನಿಲ್ಲುವ ಹಂತಕ್ಕೆ ತಲುಪಿತ್ತು.

ಎಂ.ಕೆ. ರಝಾಕ್ ಎಂಬವರು ಅಭಯಹಸ್ತ ನೀಡುವ ಮೂಲಕ ಮದುವೆ ಸುಸೂತ್ರವಾಗಿ ನಡೆದಿದೆ. ಎಂ.ಕೆ. ರಝಾಕ್ ಮತ್ತು ಎಂ.ಕೆ. ರಿಯಾಝ್ ಅವರು ಕವನಾ ಅವರ ಮನೆಗೆ ಗ್ಯಾಸ್, ರೇಶನ್ ವ್ಯವಸ್ಥೆ ಮಾಡಿದ್ದರು. ನಂತರ ಮದುವೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಇವರು ಎಂ.ಕೆ. ಗ್ರೂಪಿನ ಅಧ್ಯಕ್ಷರಾದ ಯು.ಎಚ್. ಅಬ್ದುರ್ರಹ್ಮಾನ್ ಹಾಗೂ ಎಂ.ಕೆ. ಹಂಝ ಅವರ ಮುತುವರ್ಜಿಯೊಂದಿಗೆ ಎಂ.ಕೆ. ಗ್ರೂಪ್ ಮ್ಯಾರೇಜ್ ಫಂಡ್ ನಿಂದ ಕವನ ಮದುಗೆ ಸಹಾಯ ಮಾಡಿದ್ದಾರೆ. ಶಾಸಕ ಯು.ಟಿ.ಖಾದರ್ ಸಹ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದಾರೆ. ಭಾನುವಾರ ವರ ರಂಜಿತ್ ಜೊತೆಗೆ ತಲಪಾಡಿಯ ದೇವಿನಗರದಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕುಟುಂಬಿಕರ ಸಮ್ಮುಖದಲ್ಲಿ ನಡೆಯಿತು.