ಲಕ್ನೋ : ಅಗಸ್ಟ್ 15ರಂದು ದೇಶದ ಪ್ರಮುಖ ನಗರಗಳಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ ಇಬ್ಬರು ಉಗ್ರರನ್ನು ಉತ್ತರ ಪ್ರದೇಶ ಭಯೋತ್ಪಾದನ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. ಇಂದು ಲಕ್ನೋದಲ್ಲಿ ನಡೆದ ವಿಶೇಷ ಕಾರ್ಯಚರಣೆಯಲ್ಲಿ ಇಬ್ಬರು ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿದೆ.
ಬಂಧಿತ ಇಬ್ಬರು ಉಗ್ರರನ್ನು ಮಿನ್ಹಾಜ್ ಅಹ್ಮದ್ ಮತ್ತು ಮಸೀರುದ್ದೀನ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಅಲ್ ಖೈದಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಉತ್ತರ ಪ್ರದೇಶ ಪೊಲೀಸ್ ಎಡಿಜಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಲಕ್ನೋದ ಕಾಕೋರಿ ಪ್ರದೇಶದಲ್ಲಿ ಭಯೋತ್ಪಾದಕರ ದೊಡ್ಡ ಘಟಕವಿದ್ದು ಇದು ದೇಶದ ಹಲವು ಕಡೆ ಸ್ಫೋಟ ನಡೆಸಲು ತಯಾರಿ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಖಚಿತ ಮಾಹಿತಿ ಮೇಲೆ ಕಾರ್ಯಚರಣೆ ನಡೆಸಿದ ಎಟಿಎಸ್ ತಂಡ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ದಾಳಿಯ ವೇಳೆ, ಶಸ್ತ್ರಾಸ್ತ್ರ ಮತ್ತು ಸ್ಪೋಟಕಗಳು ಪತ್ತೆಯಾಗಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಿನ್ಹಾಜ್ ಅಹ್ಮದ್ ಮತ್ತು ಮಸೀರುದ್ದೀನ್ ಕಿಂಗ್ ಪಿನ್ ಎನ್ನಲಾಗಿದ್ದು ಇವರ ಸಹಚರರು ಕಾನ್ಪುರ ಸೇರಿದಂತೆ ದೇಶದ ಹಲವು ಮಹಾನಗರಗಳಲ್ಲಿದ್ದಾರೆ ಎಂದು ಅನುಮಾನಿಸಲಾಗಿದೆ.
ಅಲ್ ಖೈದಾದ ಉತ್ತರ ಪ್ರದೇಶದ ಮಾಡ್ಯೂಲ್ ಮುಖ್ಯಸ್ಥ ಉಮರ್ ಹಲ್ಮಾಂಡಿ ಅವರ ಸೂಚನೆಯ ಮೇರೆಗೆ ಅಹ್ಮದ್ ಮತ್ತು ಮಸೀರುದ್ದೀನ್ ಮತ್ತು ಅವರ ಸಹಚರರು ಆಗಸ್ಟ್ 15 ರಂದು ರಾಜ್ಯದ ವಿವಿಧ ನಗರಗಳಲ್ಲಿ, ಅದರ ರಾಜಧಾನಿ ಲಕ್ನೋದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಸಡಿಲಿಸಲು ಯೋಜಿಸುತ್ತಿದ್ದರು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಹೇಳಿದರು.
ಪ್ರಮುಖ ಸ್ಥಳಗಳು, ಸ್ಮಾರಕಗಳು ಮತ್ತು ಕಿಕ್ಕಿರಿದ ಸ್ಥಳಗಳಲ್ಲಿ ಸ್ಫೋಟಿಸಲು ಸಂಚು ರೂಪಿಸಲಾಗುತ್ತಿತ್ತು ಇದಕ್ಕಾಗಿ ಮತ್ತು ಮಾನವ ಬಾಂಬುಗಳನ್ನು ಬಳಸುವ ಇರಾದೆ ಇತ್ತು. ಈ ಕೃತ್ಯ ನಡೆಸಲು ಅವರು ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಸಂಗ್ರಹಿಸುತ್ತಿದ್ದರು ಎಂದು ಕುಮಾರ್ ಹೇಳಿದರು.