ಉಡುಪಿ: ಮೇಲಿನ ಚಿತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅಂತಃಕರಣ ತುಂಬಿ ಬಂದು ಗೌರವ, ವಿಶ್ವಾಸದಿಂದ ಕೈ ಹಿಡಿದುಕೊಂಡಿರುವ ಈ ವೃದ್ಧೆಯ ಹೆಸರು ಲಕ್ಷ್ಮೀ. ಊರು ಮಲ್ಪೆ.
ತೀರಾ ಬಡ ಕುಟುಂಬದಿಂದ ಬಂದಿರುವ ಈಕೆ ಹಸಿ ಮೀನು ಖರೀದಿಸಿ, ಅದನ್ನು ಒಣಮೀನಾಗಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿರುವವರು. ಜೀವನ ಸಂಜೆಯಲ್ಲಾದರೂ ಒಂದು ಸ್ವಂತ ಸೂರು ಹೊಂದಬೇಕೆಂದು ಒಣ ಮೀನು ಮಾರಾಟದಲ್ಲಿ 40 ಸಾವಿರ ರೂಪಾಯಿ, ಉಳಿತಾಯ ಮಾಡಿಟ್ಟುಕೊಂಡಿದ್ದರು.
ಮೊದಲಿಂದಲೂ ಕಂಡವರ ಸಮಸ್ಯೆಗೆ ಕರಗುವ, ಮಮ್ಮುಟ್ಟಿ ಮರುಗುವ ಗುಣ ರೂಢಿಸಿಕೊಂಡಿದ್ದ ಮಾತೃ ಹೃದಯದ ಲಕ್ಷ್ಮೀ ಅವರಿಗೆ ಕೊರೋನಾ ಸಂದರ್ಭದಲ್ಲಿ ತಮಗಿಂತಲೂ ಬಡವರು ಅನ್ನ, ಆಹಾರಕ್ಕಾಗಿ ಪರಿತಪಿಸುತ್ತಿರುವುದನ್ನು ನೋಡಿ, ಸಹಿಸಿಕೊಳ್ಳಲು ಆಗಲಿಲ್ಲ.
ತಡಮಾಡದೇ, ಮನೆ ಕಟ್ಟಲೆಂದು ತಾವು ಕೂಡಿಟ್ಟಿದ್ದ 40 ಸಾವಿರ ರೂಪಾಯಿಯಲ್ಲಿ ಅಕ್ಕಿ, ಬೇಳೆ, ಸಕ್ಕರೆ, ಎಣ್ಣೆ ಖರೀದಿಸಿ ಅದನ್ನು ಬಡವರಿಗೆ ಉಚಿತವಾಗಿ ಹಂಚಿಬಿಟ್ಟರು. ಆ ಮೂಲಕ ಹೃದಯ ಶ್ರೀಮಂತಿಕೆ ಮೆರೆದರು. ಮತ್ತೊಬ್ಬರ ಕಷ್ಟಕ್ಕೆ ನೆರವಾಗಲು ಹಣವಂತಿಕೆಗೂ ಮಿಗಿಲಾಗಿ ಗುಣವಂತಿಕೆ ಬೇಕೆಂಬುದನ್ನು ಸಾರಿದರು.
Our fishing community is the backbone of our state's economy and by holding your hand I have resolved not to let you down. pic.twitter.com/4LOJ9mboGI
— DK Shivakumar (@DKShivakumar) July 6, 2021
ತದನಂತರ ಈ ವಿಷಯ ಮಾಧ್ಯಮಗಳ ಮೂಲಕ ತಿಳಿದು ಸ್ಥಳೀಯ ಕಾಂಗ್ರೆಸ್ ಮುಖಂಡರು, ಆಕೆ ಆಹಾರ ಕಿಟ್ ಗಳ ವಿತರಣೆಗೆ ವಿನಿಯೋಗಿಸಿದ್ದ 40 ಸಾವಿರ ರುಪಾಯಿಯನ್ನು ಮರಳಿಸಿದರು.
ಮಲ್ಪೆ ಬಂದರಿಗೆ ಇಂದು ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ವಿಷಯ ತಿಳಿದ ಡಿ.ಕೆ. ಶಿವಕುಮಾರ್ ಅವರು ಲಕ್ಷ್ಮೀ ಅವರನ್ನು ಭೇಟಿ ಮಾಡಿ, ಆಕೆಯ ಮಾತೃ ವಾತ್ಸಲ್ಯವನ್ನು ಮನತುಂಬಿ ಕೊಂಡಾಡಿದರು. ನಿಮ್ಮಂತಹ ತಾಯಿ ಮಮತೆಯ ಸಂತತಿ ನೂರ್ಮಡಿಯಾಗಲಿ, ಮನುಕುಲಕ್ಕೆ ಮಾದರಿಯಾಗಲಿ ಎಂದು ಬಯಸಿದರು.