ಬೆಂಗಳೂರು : ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಂಬಂಧ ಸೃಷ್ಟಿಯಾಗಿದ್ದ ಬಿಕ್ಕಟ್ಟು ಕೊನೆಗೂ ಬಗೆಹರಿದಿದೆ. ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದ ರಕ್ಷಾ ರಾಮಯ್ಯ ಮತ್ತು ಮಹಮ್ಮದ್ ನಲಪಾಡ್ ಗೂ ಅಧಿಕಾರ ಹಂಚಲು ಹೈಕಮಾಂಡ್ ತಿರ್ಮಾನಿಸಿದೆ.
ಒಂದು ಮೂರು ವರ್ಷದ ಅಧಿಕಾರದ ಅವಧಿಯಲ್ಲಿ ಒಂದು ವರ್ಷ ರಕ್ಷ ರಾಮಯ್ಯಗೆ ಎರಡು ವರ್ಷ ಮಹಮ್ಮದ್ ನಲಪಾಡ್‌ಗೆ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಆದೇಶಿಸಿದ್ದಾರೆ.
ಈ ಬಗ್ಗೆ ಅಧಿಕೃತ ಪತ್ರ ರವಾನೆ ಮಾಡಿದ್ದು ಪತ್ರದಲ್ಲಿ ಉಲ್ಲೇಖಿಸಿದಂತೆ, ಜನವರಿ 31, 2022 ವರೆಗೂ ರಕ್ಷ ರಾಮಯ್ಯ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದು, ಬಳಿಕ ಮುಂದಿನ ಎರಡು ವರ್ಷ ಮಹಮ್ಮದ್ ನಲಪಾಡ್ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿದ್ದಾರೆ.

ಯೂಥ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ರಕ್ಷ ರಾಮಯ್ಯ ಪರ ವಿಪಕ್ಷ ನಾಯಕ ಸಿದ್ದರಾಮಯ್ಯ, ನಲಪಾಡ್ ಪರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಲಾಭಿಗೆ ಇಳಿದಿದ್ದರು. ಉಭಯ ನಾಯಕರ ಗುದ್ದಾಟದಿಂದ ಹೈರಾಣಾಗಿದ್ದ ಹೈಕಮಾಂಡ್ ಕೊನೆಗೆ ಇಬ್ಬರಿಗೂ ಅಧಿಕಾರ ಹಂಚುವ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಪಟ್ಟಿದೆ.
ಯೂತ್ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಮಹಮ್ಮದ್ ನಲಪಾಡ್ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದರು ಆದರೆ ಅವರ ಮೇಲೆ ಹಲವು ಆರೋಪಗಳಿರುವ ಹಿನ್ನಲೆ ಎರಡನೇ ಸ್ಥಾನದಲ್ಲಿದ್ದ ರಕ್ಷ ರಾಮಯ್ಯಗೆ ಅಧಿಕಾರ ನೀಡಲಾಗಿತ್ತು. ಇದನ್ನು ವಿರೋಧಿಸಿ ಮಹಮ್ಮದ್ ನಲಪಾಡ್ ಹೈಕಮಾಂಡ್ ಮಟ್ಟದಲ್ಲಿ ಲಾಭಿ ನಡೆಸಿದ್ದರು.