ಬೆಂಗಳೂರು : ಮೇಕೆದಾಟು ಆಣೆಕಟ್ಟು ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಪತ್ರ ಬರೆದಿದ್ದೆ ತಪ್ಪು ಎಂದು ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಯೋಜನೆಗೆ ಅಡ್ಡಿಪಡಿಸದಂತೆ ಎಂ.ಕೆ ಸ್ಟಾಲಿನ್ ಬಿ.ಎಸ್ ಯಡಿಯೂರಪ್ಪ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಆಣೆಕಟ್ಟು ಕಟ್ಟೋಕೆ ತಮಿಳುನಾಡು ಅನುಮತಿ ಯಾಕೆ ಬೇಕು? ಕೋರ್ಟ್ ಆದೇಶದಂತೆ ನಾವು ಕೆಲಸ ಮಾಡಬೇಕು. ಪತ್ರ ಬರೆಯುವ ಅವಶ್ಯಕತೆ ಇರಲಿಲ್ಲ ಎಂದು ಅವರು ಹೇಳಿದ್ದಾರೆ.
ಸಿಎಂ ಬಿ.ಎಸ್ ಯಡಿಯೂರಪ್ಪ ಪತ್ರ ಬರೆದ ಕಾರಣ ಎಂ.ಕೆ ಸ್ಟಾಲಿನ್ ಪ್ರತಿಕ್ರಿಯೆ ನೀಡಿದ್ದಾರೆ. ಪತ್ರ ಬರೆದು ಅನುಮತಿ ಕೇಳಿದ್ರೆ ಯಾರು ಒಪ್ಪಲ್ಲ, ಡ್ಯಾಂ ನಿರ್ಮಾಣದಿಂದ ತಮಿಳುನಾಡು ಪಾಲಿನ ನೀರಿಗೆ ಸಮಸ್ಯೆ ಆಗಲ್ಲ, ನಮ್ಮ ಸರ್ಕಾರ ಇದ್ದಾಗ ನೀರಿನ ವಿಚಾರದಲ್ಲಿ ಪತ್ರ ಬರೆದು ಅನುಮತಿ ಕೇಳಿರಲಿಲ್ಲ ಎಂದರು.