ಬೆಂಗಳೂರು: ಪಕ್ಷ ಬಿಟ್ಟು ಹೋದ ಆ 14 ಜನರನ್ನು ಸೇರಿಸಿಕೊಳ್ಳಲ್ಲ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಇಂದು ಬೆಳಗ್ಗೆ ಪಕ್ಷ ಬಿಟ್ಟು ಹೋದ 14 ಶಾಸಕರು ಮಾತ್ರವಲ್ಲ ಯಾರು ಬೇಕಾದರೂ ಕಾಂಗ್ರೆಸ್ ಸೇರಲು ಅರ್ಜಿ ಹಾಕಿಕೊಳ್ಳಬಹುದು ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, 14 ಮಂದಿಯನ್ನೂ ಸೇರಿಸಿಕೊಳ್ಳುವುದಾಗಿ ಯಾರೂ ಹೇಳಿಲ್ಲ. ಈ ಕುರಿತು ನಾನು ಅಧ್ಯಕ್ಷರ ಜೊತೆ ಮಾತನಾಡುತ್ತೇನೆ ಎಂದರು.
ಇನ್ನೂ ಇದೇ ವೇಳೆ ಡಿ ವಿ ಸದಾನಂದಗೌಡರು ತಮ್ಮ ವಿರುದ್ಧ ಯಾವುದೇ ವಿಡಿಯೋ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆ ಆದೇಶ ತಂದಿದ್ದಾರೆ. ಕಳ್ಳನ ಮನಸ್ಸು ಹುಳ್ಳಗೆ ಎಂಬಂತೆ ಆಗಿದೆ ಅವರ ಸ್ಥಿತಿ. ಕುಂಬಳ ಕಾಯಿ ಕಳ್ಳ ಎಂದರೆ ಅವರು ಹೆಗಲು ಮುಟ್ಟಿ ನೋಡಿಕೊಳ್ಳುವುದೇಕೆ ಎಂದು ಸಿದ್ದರಾಮಯ್ಯ ಅವರು ವ್ಯಂಗ್ಯ ಮಾಡಿದ್ರು.
ಕೋವಿಡ್ ಲಸಿಕೆಯ ಎರಡನೇ ಡೋಸ್‍ಗಾಗಿ ರಾಜ್ಯದಲ್ಲಿ ಜನ ಪರದಾಡುತ್ತಿದ್ದಾರೆ. ಲಸಿಕೆ ನೀಡುವ ಕಾರ್ಯವನ್ನು ಸಮರ್ಪಕವಾಗಿ ನಡೆಸುವಲ್ಲಿ ಈ ಸರ್ಕಾರ ವಿಫಲವಾಗಿದೆ. 18 ವರ್ಷ ಮೀರಿದವರಿಗೆ ಲಸಿಕೆ ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ಎಲ್ಲಿಯೂ ಲಸಿಕೆ ಸಿಗುತ್ತಿಲ್ಲ. ಲಸಿಕೆ ದಾಸ್ತಾನಿಲ್ಲ ಎಂದು ಬಿಬಿಎಂಪಿ ಆಯುಕ್ತರೇ ಹೇಳಿದ್ದಾರೆ. ಆರೋಗ್ಯ ಸಚಿವರು ಮಾತ್ರ ನಮ್ಮಲ್ಲಿ ಸಮಸ್ಯೆಯೇ ಇಲ್ಲ ಎನ್ನುತ್ತಿದ್ದಾರೆ. ಲಸಿಕೆ ಪೂರೈಕೆ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ ಎಂದರು.