‘ಬಿ’ ರಿಪೋರ್ಟ್ ವಜಾ: ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶ
ಅಕ್ರಮ ಡಿ-ನೋಟಿಫಿಕೇಷನ್ ಪ್ರಕರಣದಲ್ಲಿ ಈ ಹಿಂದೆ ಜೈಲು ವಾಸ ಅನುಭವಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೀಗ ಅಂತಹುದೇ ಸಂಕಷ್ಟಕ್ಕೆ ಈಡಾಗಿದ್ದಾರೆ.
ಬೆಂಗಳೂರು ನಗರದ ಬೆಳ್ಳಂದೂರು ಹಾಗೂ ದೇವರ ಬೀಸನಹಳ್ಳಿಯಲ್ಲಿ ಐ.ಟಿ ಕಾರಿಡಾರ್‌ಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಶಪಡಿಸಿಕೊಂಡಿದ್ದ ಜಮೀನನ್ನು ಅಕ್ರಮವಾಗಿ ಡಿ-ನೋಟಿಫೈ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪನವರ ಪರವಾಗಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ‘ಬಿ’ ರಿಪೋರ್ಟ್ ಅನ್ನು ತಿರಸ್ಕರಿಸಿದ್ದ ಲೋಕಾಯುಕ್ತ ಪೊಲೀಸರ ಕ್ರಮವನ್ನು ಹೊಡೆದು ಹಾಕಲಾಗಿದೆ.
“ಈ ಗಂಭೀರ ಪ್ರಕರಣವನ್ನು ಹೊಸದಾಗಿ ತನಿಖೆ ನಡೆಸಿ” ಎಂದು ಲೋಕಾಯುಕ್ತ ಉಪ ಅಧೀಕ್ಷಕರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಆದೇಶ ನೀಡಲಾಗಿದೆ.
ಹೀಗಾಗಿ ಯಡಿಯೂರಪ್ಪನವರ ಕೊರಳಿಗೆ ಮತ್ತೊಮ್ಮೆ ಜಮೀನು ಅಕ್ರಮ ಡಿ-ನೋಟಿಫೈ ಸಂಕಷ್ಟ ಸುತ್ತಿಕೊಂಡಿದೆ.
ಯಡಿಯೂರಪ್ಪ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸುವಂತೆ 2015ರ ಫೆ.18ರಂದು ಲೋಕಾಯುಕ್ತ ಕೋರ್ಟ್ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಯಡಿಯೂರಪ್ಪ 2019ರ ಜ.25ಕ್ಕೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಯಡಿಯೂರಪ್ಪನವರ ಈ ಅರ್ಜಿ ಮನ್ನಿಸಿದ್ದ ಹೈಕೋರ್ಟ್, ಏ.2ರಂದು ತನಿಖೆಗೆ ತಡೆ ನೀಡಿತ್ತು. ನಂತರದಲ್ಲಿ ಹೈಕೋರ್ಟ್, “ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸಿ” ಎಂದು 2020ರ ಡಿ.24ರಂದು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು.
ತನ್ನ ಈ ಆದೇಶದಲ್ಲಿ, “ಉನ್ನತ ಹುದ್ದೆಯಲ್ಲಿರುವವರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ತನಿಖೆ ಪ್ರಗತಿ ಕಾಣದಿದ್ದರೆ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆ ಹಾಗೂ ವಿಶ್ವಾಸವನ್ನು ಸಾರ್ವಜನಿಕರು ಕಳೆದುಕೊಳ್ಳುವ ಪರಿಸ್ಥಿತಿ ಉದ್ಭವಿಸುತ್ತದೆ” ಎಂದು ಅಭಿಪ್ರಾಯಪಟ್ಟಿತ್ತು.
“ಹೈಕೋರ್ಟ್ ತಡೆಯಾಜ್ಞೆ ಆದೇಶ ದೊರೆತ ನಂತರದ ನಾಲ್ಕು ವರ್ಷಗಳ ಅಂತರದಲ್ಲಿ ಪ್ರಕರಣದ ತನಿಖೆ ನಡೆಸುವುದಕ್ಕೆ ಯಾವುದೇ ಕೋರ್ಟ್ ತಡೆಯಾಜ್ಞೆ ಇರಲಿಲ್ಲ. ಆದರೂ, ಲೋಕಾಯುಕ್ತ ಪೊಲೀಸರು ಯಡಿಯೂರಪ್ಪ ವಿರುದ್ಧ ತನಿಖೆ ನಡೆಸಿಲ್ಲ. ತನಿಖೆ ನಡೆಸದೇ ಇರುವುದಕ್ಕೆ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ವಿವರಣೆ ಒಪ್ಪುವಂತಹುದಲ್ಲ” ಎಂದು ವಿವರಿಸಿತ್ತು.
ಅಂತೆಯೇ, ಪ್ರಕರಣದ ತನಿಖೆಯ ಮೇಲ್ವಿಚಾರಣೆ ನಡೆಸುವಂತೆ ಲೋಕಾಯುಕ್ತ ಕೋರ್ಟ್‌ಗೆ ನಿರ್ದೇಶಿಸಿತ್ತು.
ಇದಾದ ಒಂದೇ ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿದ್ದ ಲೋಕಾಯುಕ್ತ ಪೊಲೀಸರು, 2021ರ ಜ.18ರಂದು ಲೋಕಾಯುಕ್ತ ಕೋರ್ಟ್ ಗೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದರು.
“ಯಡಿಯೂರಪ್ಪನವರ ವಿರುದ್ಧದ ಆರೋಪಗಳು ಸಾಬೀತಾಗಿಲ್ಲ” ಎಂದು ಅವರ ಪರವಾಗಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ‘ಬಿ’ ರಿಪೋರ್ಟ್ ಅನ್ನು ಈಗ ರದ್ದುಪಡಿಸಲಾಗಿದೆ.
“ಈ ಗಂಭೀರ ಪ್ರಕರಣವನ್ನು ಹೊಸದಾಗಿ ತನಿಖೆ ನಡೆಸಿ ಆದಷ್ಟು ಶೀಘ್ರ ವರದಿ ಸಲ್ಲಿಸಿ” ಎಂದು ತನಿಖಾಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಾಲಯ ಆದೇಶಿಸಿದೆ.
ಪ್ರಕರಣವೇನು?:
2000-2001ನೇ ಸಾಲಿನಲ್ಲಿ ವೈಟ್‌ಫೀಲ್ಡ್ ವ್ಯಾಪ್ತಿಯ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸುಮಾರು 500 ಎಕರೆಯನ್ನು ಐ.ಟಿ ಕಾರಿಡಾರ್ ಎಂದು ರಾಜ್ಯ ಸರ್ಕಾರ ಘೋಷಿಸಿತ್ತು. ಈ ನಿಟ್ಟಿನಲ್ಲಿ ಮಾರತ್ ಹಳ್ಳಿ, ಬೆಳ್ಳಂದೂರು, ಸರ್ಜಾಪುರ, ದೇವರ ಬೀಸನಹಳ್ಳಿ, ಕಾಡುಬೀಸನಹಳ್ಳಿ, ಕರಿಯಮ್ಮನ ಅಗ್ರಹಾರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿನ 434 ಎಕರೆ ಪ್ರದೇಶದ ಭೂ ಸ್ವಾಧೀನಕ್ಕೆ ಕೆಐಎಡಿಬಿ ಅಧಿಸೂಚನೆ ಹೊರಡಿಸಿತ್ತು.
ಖಾಸಗಿ ದೂರು: “ಕೆಐಎಡಿಬಿ ವಶಪಡಿಸಿಕೊಂಡಿದ್ದ ದೇವರ ಬೀಸನಹಳ್ಳಿಯ ಸರ್ವೇ ನಂ. 49ರ 4.30 ಎಕರೆ, ಬೆಳ್ಳಂದೂರು ಗ್ರಾಮದ ಸರ್ವೇ ನಂ. 46/1ರ 1.17 ಎಕರೆ, ಸರ್ವೇ ನಂ. 18ರ 1.10 ಎಕರೆ, ಸರ್ವೇ ನಂ. 10ರ 33 ಗುಂಟೆ ಜಾಗವನ್ನು ಡಿ-ನೋಟಿಫಿಕೇಷನ್ ಮಾಡಲು ಅಕ್ರಮವಾಗಿ ಆದೇಶಿಸಲಾಗಿದೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದರು. ಮತ್ತು ಈ ಅಕ್ರಮ ಡಿ ನೋಟಿಫಿಕೇಷನ್ ಮಾಡಲು ಅವರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ” ಎಂದು ಆರೋಪಿಸಿ ಹೈಕೋರ್ಟ್ ವಕೀಲರಾದ ವಾಸುದೇವ ರೆಡ್ಡಿ 2013ರ ಜುಲೈ 10ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಈ ದೂರಿನ ವಿಚಾರಣೆ ನಡೆಸಿದ್ದ ಲೋಕಾಯುಕ್ತ ಕೋರ್ಟ್, “ಆರೋಪಗಳ ಕುರಿತು ಸೂಕ್ತ ತನಿಖೆ ನಡೆಸಿ” ಎಂದು ಲೋಕಾಯುಕ್ತ ಪೊಲೀಸರಿಗೆ 2015ರ ಫೆ.18ರಂದು ಆದೇಶಿಸಿತ್ತು.
ಇದರನ್ವಯ ಪೊಲೀಸರು 2015ರ ಫೆ.21ರಂದು ಎಫ್ ಐ ಆರ್ ದಾಖಲಿಸಿ, ಯಡಿಯೂರಪ್ಪ ಅವರನ್ನು ಪ್ರಕರಣದ ಎರಡನೇ ಆರೋಪಿಯನ್ನಾಗಿ ಹೆಸರಿಸಿದ್ದರು.
ಇದನ್ನು ಪ್ರಶ್ನಿಸಿ ಯಡಿಯೂರಪ್ಪ,
2019ರ ಜ.25ರಂದು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
“ವಿಶೇಷ ನ್ಯಾಯಾಲಯ ದೂರನ್ನು ವಿಚಾರಣೆಗೆ ಅಂಗೀಕರಿಸಿರುವುದು ಕಾನೂನು ಬಾಹಿರ. ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೇ ನನ್ನ ವಿರುದ್ಧ ದೂರು ದಾಖಲಿಸಲಾಗಿದೆ” ಎಂದು ಆಕ್ಷೇಪಿಸಿದ್ದರು.
“ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರ ಫಿರ್ಯಾದುದಾರ ಮೊದಲಿಗೆ ಸಂಬಂಧಪಟ್ಟ ಪೊಲೀಸರ ಮೊರೆ ಹೋಗಿ ಪ್ರಕರಣದ ಕುರಿತು ಮಾಹಿತಿ ಒದಗಿಸಬೇಕು. ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದಲ್ಲಿ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಬೇಕು. ಆದರೆ, ಫಿರ್ಯಾದುದಾರರು ನೇರವಾಗಿ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಇದು ಕಾನೂನು ಬಾಹಿರ. ಆದ್ದರಿಂದ, ನನ್ನ ವಿರುದ್ಧದ ಈ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು” ಎಂದು ಕೋರಿದ್ದರು.
ಈ ಅರ್ಜಿಯನ್ನು ಹೈಕೋರ್ಟ್, 2020ರ ಡಿ.24ರಂದು ವಜಾಗೊಳಿಸಿತ್ತು.